ಇಸ್ತಾಂಬುಲ್:
ಇಂದು ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿರುವ ಘಟನೆ ಪೂರ್ವ ಟರ್ಕಿಯ ಎಲಾಜಿಂಗ್ ಪ್ರಾಂತ್ಯದಲ್ಲಿ ನಡೆದಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.7ರಷ್ಟು ದಾಖಲಾಗಿದೆ. ಪೂರ್ವ ಪ್ರಾಂತ್ಯದ ಸಿವ್ರೈಸ್‌ನಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪ ಕೇಂದ್ರ ಬಿಂದುವಿತ್ತು ಎಂದು ವಿಪತ್ತು ಮತ್ತು ತುರ್ತು ಪರಿಸ್ಥಿತಿ ನಿರ್ವಹಣಾ ಇಲಾಖೆ ತಿಳಿಸಿದೆ.
ಘಟನೆಯಲ್ಲಿ ಕನಿಷ್ಠ 18 ಮಂದಿ ಬಲಿಯಾಗಿದ್ದು, ಎಲಾಝಿಗ್ ಪ್ರಾಂತ್ಯದಲ್ಲಿ 13 ಮಂದಿ ಹಾಗೂ ಮಲಾತ್ಯ ಪ್ರಾಂತ್ಯದಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೇ 553 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಭೂಕಂಪ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು, ನಮ್ಮ ಜನರ ಬೆಂಬಲಕ್ಕೆ ನಾವಿದ್ದೇವೆ ಎಂದು ಅಧ್ಯಕ್ಷ ರೆಸಿಪ್ ತಯ್ಯಬ್ ಎರ್ದೊಗಾನ್ ಟ್ವೀಟ್ ಮಾಡಿದ್ದಾರೆ.
ಇನ್ನು ಭೂಕಂಪದಿಂದ ಕುಸಿದಿರುವ ಕಟ್ಟಡಗಳ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವ ಮಂದಿಯನ್ನು ರಕ್ಷಿಸುವ ಪರಿಹಾರ ಕಾರ್ಯ ಭರದಿಂದ ಸಾಗಿದೆ.
ದುರಂತದ ಹಿನ್ನೆಲೆಯಲ್ಲಿ ದೇಶಾದ್ಯಂತ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಮನೆಗಳಿಂದ ಹೊರಕ್ಕೆ ಓಡಿಬಂದ ಜನ, ಮೈಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಬೀದಿಗಳಲ್ಲಿ ಬೆಂಕಿ ಹಚ್ಚಿ ರಕ್ಷಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ