ಬೆಂಗಳೂರು :
ರಾಜ್ಯದಲ್ಲಿ ಈಗ ಕಂದಾಯ ಇಲಾಖೆ ನೀಡುವ ಇಸಿ ಸಿಗುವುದು ಅಷ್ಟು ಸುಲಭವಲ್ಲ. ಇಸಿ ಸಿಗದೆ ಇ-ಆಸ್ತಿ ಪತ್ರಗಳು ಸಿಗುತ್ತಿಲ್ಲ. ಇವೆರಡೂ ಸಿಗದೆ ಆಸ್ತಿಗಳ ನೋಂದಣಿ ಸಾಧ್ಯವಿಲ್ಲ. ಈ ಸಮಸ್ಯೆಗಳು ಈಗ ವಿಪರೀತಕ್ಕೆ ಹೋಗಿರುವ ಪರಿಣಾಮ ಆಸ್ತಿಗಳ ನೋಂದಣಿ ಇಲ್ಲದೆ ಸರಕಾರಕ್ಕೆ ಸುಮಾರು 2068 ಕೋಟಿ ರು. ಆದಾಯ ಕೈತಪ್ಪಿ ಹೋಗಿದೆ. ಅಂದರೆ ನಿಗದಿತ ನೋಂದಣಿಗಳ ಗುರಿಯಲ್ಲಿ 68800 ದಾಖಲೆಗಳ ನೋಂದಣಿ ಕಡಿಮೆಯಾಗಿದ್ದು, ಇದರಿಂದ ನಿಗದಿತ ಗುರಿಯ ಆದಾಯಕ್ಕಿಂತ ಸುಮಾರು 2068 ಕೋಟಿ ರು. ಕಡಿಮೆ ಸಂಗ್ರಹ ವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೆ ಕಾವೇರಿ 2.0 ತಂತ್ರಾಂಶದ ತೊಂದರೆ ಹಾಗೂ ಇ-ಆಸ್ತಿ ತಂತ್ರಾಂಶದ ಸಮಸ್ಯೆ ಕಾರಣ ಎಂದು ಹೇಳಲಾಗುತ್ತಿದ್ದು, ಇದೆಲ್ಲವನ್ನೂ ಒಂದೇ ಪದದಲ್ಲಿ ಸರ್ವರ್ ಸಮಸ್ಯೆ ಎಂದು ಕಚೇರಿ ಸಿಬ್ಬಂದಿ ಹೇಳಿ ಸಮಸ್ಯೆಗಳ ಮರೆಮಾಚುತ್ತಿದ್ದಾರೆ. ಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಆಸ್ತಿಗಳ ನೋಂದಣಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ರಾಜ್ಯ ಬೊಕ್ಕಸಕ್ಕೆ ಇದರ ಬಿಸಿ ನೇರವಾಗಿ ತಟ್ಟುತ್ತಿದೆ.
ಅದರಲ್ಲೂ ಬಜೆಟ್ ತಯಾರಿ ಸಂದರ್ಭದಲ್ಲಿ ಆದಾಯ ಪ್ರಮಾಣ ಗಮನಾರ್ಹವಾಗಿ ಇಳಿಕೆ ಯಾಗುತ್ತಿರುವುದು ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳು ಮತ್ತು ಸಚಿವರ ನಡುವಿನ ಆರೋಪ, ಪತ್ಯಾರೋಪದ ಶೀತಲ ಸಮರ ತೀವ್ರಗೊಳ್ಳುತ್ತಿದೆ. ಅಂದ ಹಾಗೆ ರಾಜ್ಯದಲ್ಲಿ ಆಸ್ತಿಗಳ ನೋಂದಣಿ ಇತಿಹಾಸ ತಿಳಿಯುವ ಕಂದಾಯ ಇಲಾಖೆ ನೀಡುವ ಇಸಿ (ಋಣಭಾರ ಪ್ರಮಾಣ ಪತ್ರ) ಸಿಗದೆ ಜನರು ಪರದಾಡುವಂತಾಗಿದೆ.
ಈ ಸಮಸ್ಯೆ ಅನೇಕ ತಿಂಗಳಿನಿಂದಲೂ ಇಲಾಖೆಯನ್ನು ಕಾಡುತ್ತಿದ್ದರೂ ಕಳೆದ 20 ದಿನಗಳಿಂದ ವಿಪರೀತಕ್ಕೆ ಹೋಗಿದೆ. ಈ ಹಿಂದೆ ಕೇವಲ ಮೂರು ದಿನಗಳಲ್ಲಿ ಸಿಗುತ್ತಿದ್ದ ಇಸಿ ಈಗ 15 ದಿನಗಳಾ ದರೂ ಸಿಗುತ್ತಿಲ್ಲ. ಈ ಪತ್ರ ಇಲ್ಲದೆ ಜನರು ಇ-ಆಸ್ತಿ ಎಂಬ ಕಟ್ಟಡದ ಮಾಲೀಕತ್ವ ನಿರ್ಧರಿಸುವ ಪತ್ರ ಪಡೆಯಲಾಗುತ್ತಿಲ್ಲ. ಈ ಹಿಂದೆ ಮೂರು ದಿನಗಳಲ್ಲಿ ಸಿಗುತ್ತಿದ್ದ ಇ-ಆಸ್ತಿ ಪತ್ರ ಈಗ ತಿಂಗಳವರೆಗೂ ಕಾಯಬೇಕಿದೆ. ಇವೆರಡೂ ಇಲ್ಲದೆ ಜನರು ಆಸ್ತಿಗಳ ನೋಂದಣಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಳೆದ ನಾಲ್ಕೈದು ತಿಂಗಳಲ್ಲಿ ಬೆಂಗಳೂರಿನ 42 ನೋಂದಣಿ ಕಚೇರಿಗಳು ಸೇರಿದಂತೆ ರಾಜ್ಯದ 252 ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿಗಳ ನೋಂದಣಿ ಅಕ್ಷರಶಃ ನೆಲ ಕಚ್ಚಿದೆ.
ಅದರಲ್ಲೂ ನೋಂದಣಿಯಿಂದ ಬರುವ ಒಟ್ಟಾರೆ ಆದಾಯದಲ್ಲಿ ಶೇ.60 ಸಂಗ್ರಹವಾಗುವ ಬೆಂಗ ಳೂರಿನಲ್ಲಿ ಇ-ಆಸ್ತಿ ಕಡ್ಡಾಯಗೊಳಿಸಿದ್ದು ಮತ್ತು ಅದರ ತಂತ್ರಾಂಶ ಸರಿಪಡಿಸದ ಕಾರಣ ಅಪಾರ ಪ್ರಮಾಣದ ಆದಾಯ ಕುಂಠಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಆಸ್ತಿಗಳ ನೋಂದಣಿಗಾಗಿ ಕಾವೇರಿ 2.0 ತಂತ್ರಾಂಶ ಸಿದ್ಧಪಡಿಸಲಾಗಿತ್ತು. ಇದು ಹಿಂದಿನ ಸರಕಾರ ಅವಧಿಯ ಸಿದ್ಧವಾಗಿತ್ತು. ಆದರೆ ನಂತರ ಬಂದ ಕಾಂಗ್ರೆಸ್ ಸರಕಾರ ಈ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಪರೀಕ್ಷಿಸದೆ ಏಕಾಏಕಿ ಜಾರಿ ಗೊಳಿಸಿತ್ತು. ಇದರಿಂದಾಗಿ ಆಸ್ತಿಗಳ ನೋಂದಣಿ ಆನ್‌ಲೈನ್ ಮೂಲಕ ನಡೆಯುವಂತಾಗಿತ್ತು. ವಾಸ್ತವದಲ್ಲಿ ಇದು ಹೆಚ್ಚು ಪಾರದರ್ಶಕ ಹಾಗೂ ಅನುಕೂಲಕರವಾಗಿದೆ.
ಆದರೆ ಇದರ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸದ ಕಾರಣ ಆರಂಭದ ಸಾಕಷ್ಟು ಸಮಸ್ಯೆ ಗಳುಂಟಾಗಿ, ಇಸಿ ಸಿಗುವುದು ಮತ್ತು ಅದರಿಂದ ಆಸ್ತಿಗಳ ನೋಂದಣಿ ಮಾಡುವುದು ದುಸ್ತರ ವಾಗಿತ್ತು. ಇದರ ಮಧ್ಯೆ ಬಿಬಿಎಂಪಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಆಸ್ತಿಗಳ ನೋಂದಣಿಗೆ ಗ್ರಾಮೀಣ ಪ್ರದೇಶದಲ್ಲಿ ಇರುವ ಇ-ಸ್ವತ್ತು ಮಾದರಿಯಲ್ಲಿ ಇ-ಆಸ್ತಿ ಎಂಬ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಇದರ ತಂತ್ರಾಂಶ ಇನ್ನೂ ಅಧ್ವಾನ ಎನ್ನುವಂತಾಗಿದೆ. ಈ ಹಿಂದೆ ಸಹಾಯಕ ಕಂದಾಯ ಅಧಿಕಾರಿಗಳು ನಿತ್ಯ 40 ಇ- ಸ್ವತ್ತು ನೀಡುವ ಬದಲು 3 ಇ-ಸ್ವತ್ತು ನೀಡುವುದರ ಸುಸ್ತಾಗುತ್ತಿzರೆ. ಈ ಎರಡೂ ದಾಖಲೆಗಳಿಲ್ಲದೆ ಆಸ್ತಿಗಳ ಆನ್ ಲೈನ್ ನೋಂದಣಿ ಅಸಾಧ್ಯವಾಗಿತ್ತು. ಸಮಸ್ಯೆಗಳ ವಿರುದ್ಧ ಸರಕಾರ ಈಗ ಹೋರಾಟ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿ.
ಆಸ್ತಿಗಳ ನೋಂದಣಿಯಲ್ಲಿ ಕಳೆದ 8 ತಿಂಗಳ ಅವಧಿಯಲ್ಲಿ ಸತತ 4 ತಿಂಗಳ ಆದಾಯ ಕುಸಿದಿದೆ. ಜೂನ್‌ನಲ್ಲಿ ನಿಗದಿತ ಗುರಿಗಿಂತ 6.31ರಷ್ಟು ಕುಸಿದಿದೆ. ಸೆಪ್ಟೆಂಬರ್‌ನಲ್ಲಿ 5.25ರಷ್ಟು ಕಡಿಮೆ ಯಾಗಿದೆ. ಅಕ್ಟೋಬರ್ ನಲ್ಲಿ 10ರಷ್ಟು, ನವೆಂಬರ್‌ನಲ್ಲಿ 33ರಷ್ಟು ಹಾಗೂ ಡಿಸೆಂಬರ್‌ನಲ್ಲಿ 1ರಷ್ಟು ಕಡಿಮೆಯಾಗಿದೆ. ಒಟ್ಟಾರೆ ಮಾರ್ಚ್ ಅಂತ್ಯದವರೆಗಿನ ಆದಾಯ ಸಂಗ್ರಹದ ಗುರಿ 25000 ಕೋಟಿ ರು. ಗಳಲ್ಲಿ ಡಿಸೆಂಬರ್ ಅಂತ್ಯಕ್ಕೆ 16416 ಕೋಟಿಗಳು ಮಾತ್ರ ಸಂಗ್ರಹವಾಗಿದೆ. ಆದರೂ ನೋಂದಣಿ ವ್ಯವಸ್ಥೆ ಸದ್ಯಕ್ಕೆ ಚೇತರಿಸಿಕೊಳ್ಳುವಂತೆ ಕಾಣುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
![](https://prajapragathi.com/wp-content/uploads/2025/02/kaveri-2.0.gif)