ECONOMIC WAR :ಭಾರತದತ್ತ ಕೈಚಾಚಿದ ಚೀನಾ : ಕಾರಣ ಗೊತ್ತಾ…?

ನವದೆಹಲಿ:

     ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಅವರ ʼಪರಸ್ಪರ ಸುಂಕʼ ವಿಧಿಸುವ ನಿರ್ಧಾರದಿಂದ ವಿಶ್ವದಲ್ಲಿ ಆರ್ಥಿಕ ಯುದ್ಧ ಆರಂಭದ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಟ್ರಂಪ್‌ ಅವರ ʼಪರಸ್ಪರ ಸುಂಕʼವನ್ನು ವಿರೋಧಿಸಿ, ಚೀನಾ ʼಪ್ರತಿಕಾರ ಸುಂಕʼವನ್ನು ವಿಧಿಸಿತ್ತು. ಇದರಿಂದ ಕೋಪಗೊಂಡ ವಿಶ್ವದ ದೊಡ್ಡಣ್ಣ ಅಮೆರಿಕ, ಚೀನಾ ವಿರುದ್ಧ ವಿಧಿಸಲಾಗಿದ್ದ ಪರಸ್ಪರ ಸುಂಕವನ್ನು 104%ಕ್ಕೆ ಏರಿಸಿದೆ ಎಂದು ಹಲವು ವರದಿಗಳು ಹೇಳಿವೆ. ಈ ವರದಿಗಳು ಹೊರಬಿದ್ದ ಬೆನ್ನಲ್ಲೇ, ಚೀನಾ ಭಾರತದತ್ತ ಕೈಚಾಚಿದ್ದು, ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ.

    ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರರು ಮಂಗಳವಾರ X ಪೋಸ್ಟ್‌ ಮೂಲಕ ಚೀನಾ ಮತ್ತು ಭಾರತ ಅಮೆರಿಕದ ಸುಂಕ ನೀತಿಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಹೇಳಿದೆ. “ಚೀನಾ ಮತ್ತು ಭಾರತದ ಆರ್ಥಿಕ ಮತ್ತು ವ್ಯಾಪಾರ ಸಂಬಂಧವು ಪರಸ್ಪರ ಪೂರಕ ಮತ್ತು ಲಾಭವನ್ನು ಆಧರಿಸಿ ನಡೆಯುತ್ತಿದೆ. ಅಮೆರಿಕದ ವಿಧಿಸಿದ ಸುಂಕಗಳು ದುರುಪಯೋಗವಾಗುವುದನ್ನು ಎದುರಿಸಲು ಎರಡು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು (ಭಾರತ-ಚೀನಾ) ಒಗ್ಗಟ್ಟಿನಿಂದ ಹೋರಾಡಬೇಕು” ಎಂದು ವಕ್ತಾರರಾದ ಯು ಜಿಂಗ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.  

    ಚೀನಾ ಆರ್ಥಿಕ ಬೆಳವಣಿಗೆ ಜಗತ್ತಿಗೆ ಪೂರಕ ಮತ್ತು ಅಮೆರಿಕಾದ ಸುಂಕ ನೀತಿ ವಿಶ್ವ ಆರ್ಥಿಕ ವ್ಯವಸ್ಥೆಗೆ ಮಾರಕ ಎಂದಿರುವ ಯು ಜಿಂಗ್‌, “ಚೀನಾದ ಆರ್ಥಿಕತೆ ಸ್ಥಿರವಾದ ಬೆಳವಣಿಗೆಯನ್ನು ಖಚಿತಪಡಿಸುವ ಮತ್ತು ಜಗತ್ತಿನ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುವ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಚೀನಾ ವಾರ್ಷಿಕವಾಗಿ ಜಾಗತಿಕ ಆರ್ಥಿಕ ಬೆಳವಣಿಗೆಗೆ ಸರಾಸರಿ ಶೇಕಡಾ 30 ರಷ್ಟು ಕೊಡುಗೆ ನೀಡಿದೆ. ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಊಳಿಸುವ ಸಲುವಾಗಿ ನಾವು ಪ್ರಪಂಚದ ಉಳಿದ ಭಾಗಗಳೊಂದಿಗೆ ಆರ್ಥಿಕ ವ್ಯವಹಾರಗಳನ್ನು ಮುಂದುವರೆಸುತ್ತೇವೆ” ಎಂದು ಅವರು ಬರೆದುಕೊಂಡಿದ್ದಾರೆ.

    ಅಮೆರಿಕಾದ ಸುಂಕ ನೀತಿಯನ್ನು ಟೀಕಿಸುತ್ತಾ, “ವ್ಯಾಪಾರ ಮತ್ತು ತೆರಿಗೆ ಯುದ್ಧ ಸಾರಿದರೆ ಅದನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ” ಎಂದರು. ಎಲ್ಲಾ ದೇಶಗಳು ಸಮಾಲೋಚನೆಯ ತತ್ವಗಳನ್ನು ಎತ್ತಿಹಿಡಿಯಬೇಕು, ನಿಜವಾದ ಅರ್ಥದಲ್ಲಿ ಬಹುಪಕ್ಷೀಯ ಸಂಬಂಧಗಳನ್ನು ಹೊಂದಬೇಕು, ಎಲ್ಲಾ ರೀತಿಯ ಏಕಪಕ್ಷೀಯ ವಾದ ಮತ್ತು ರಕ್ಷಣಾವಾದವನ್ನು ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದು ಅವರು ಹೇಳಿದ್ದಾರೆ. 

    ಅಮೆರಿಕ ವಿರುದ್ಧ ಚೀನಾ ಪ್ರತಿಕಾರ ಸುಂಕವನ್ನು ಹೇರಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚೀನಾಗೆ ಸುಂಕ ಏರಿಕೆಯ ಬೆದರಿಕೆ ಹಾಕಿದ್ದರು. “ಏಪ್ರಿಲ್‌ 8, 2025 ರೊಳಗೆ ಪ್ರತಿಕಾರ ಸುಂಕವನ್ನು ವಾಪಸ್‌ ಪಡೆಯದಿದ್ದರೆ, ಏಪ್ರಿಲ್‌ 9 ರಿಂದ ಜಾರಿಗೆ ಬರುವಂತೆ ಚೀನಾದ ಮೇಲೆ ಶೇ. 50 ರಷ್ಟು ಹೆಚ್ಚುವರಿ ಸುಂಕಗಳನ್ನು ವಿಧಿಸಲಾಗುವುದು” ಎಂದು ಟ್ರಂಪ್‌ ಅವರು ತಮ್ಮದೇ ಒಡೆತನದ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ ಮಾಡಿದ್ದರು.

Recent Articles

spot_img

Related Stories

Share via
Copy link