ಬೆಂಗಳೂರು
ಜಾಗತಿಕ, ಆರ್ಥಿಕ ಸ್ಥಿರತೆ, ವಿಶ್ವಾಸ ಮತ್ತು ಬೆಳವಣಿಗೆಯನ್ನು ಪುನಃಸ್ಥಾಪಿಸಲು ವಿಶ್ವದ ಪ್ರಮುಖ ಆರ್ಥಿಕ ಮತ್ತು ವಿತ್ತೀಯ ತಜ್ಞರು ಅಮೂಲ್ಯ ಸಲಹೆಗಳನ್ನು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹಲವು ದೇಶಗಳು ಇಂದಿಗೂ ಹಣಕಾಸು ಅಸ್ಥಿರತೆ, ಸಾಲದ ಸುಳಿಯಲ್ಲಿ ಸಿಲುಕಿವೆ. ಪರಿಣಾಮವಾಗಿ, ಅಂತಾರಾಷ್ಟ್ರೀಯ ವಿತ್ತೀಯ ಸಂಸ್ಥೆಗಳ ಮೇಲೆ ವಿಶ್ವಾಸ ಕಡಿಮೆಯಾಗಿದ್ದು, ಸ್ಥಿರತೆ, ಭರವಸೆಯನ್ನು ಮರಳಿ ತರುವಲ್ಲಿ ಕೇಂದ್ರ ಬ್ಯಾಂಕ್ ಗಳ ಮುಖ್ಯಸ್ಥರ ಪಾತ್ರ ಪ್ರಮುಖವಾಗಿದೆ. ಜಗತ್ತು ಭಾರತದ ಆರ್ಥಿಕತೆಯಿಂದ ಸ್ಫೂರ್ತಿ ಪಡೆಯಬೇಕಾಗಿದೆ. ಭಾರತದ ಉತ್ಪಾದಕರು ಮತ್ತು ಗ್ರಾಹಕರು ಆಶಾವಾದಿಗಳಾಗಿದ್ದು, ಜಾಗತಿಕ ಆರ್ಥಿಕತೆಗೆ ಧನಾತ್ಮಕ ಸ್ಫೂರ್ತಿಯಾಗಬಲ್ಲರು ಎಂದು ಹೇಳಿದರು.
ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಿರುವ ಜಿ-20 ಹಣಕಾಸು ಸಚಿವರು ಹಾಗೂ ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಮೊದಲ ಸಭೆಯಲ್ಲಿ ಧ್ವನಿಮುದ್ರಿತ ಸಂದೇಶ ನೀಡಿ ಅವರು, ಭವಿಷ್ಯದ ಬಗ್ಗೆ ಆಶಾವಾದಿ ಹಾಗೂ ವಿಶ್ವಾಸ ಹೊಂದಿರುವ ಭಾರತೀಯ ಆರ್ಥಿಕತೆ, ಗ್ರಾಹಕರು ಮತ್ತು ಉತ್ಪಾದಕರಿಂದ ಸ್ಫೂರ್ತಿ ಪಡೆಯವಂತೆ ಪ್ರಧಾನಿ ವಿಶ್ವದ ಗಣ್ಯರನ್ನು ಸ್ವಾಗತಿಸಿ, ಸಲಹೆ-ಸೂಚನೆಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.
ಕೊವಿಡ್ ಸಾಂಕ್ರಾಮಿಕದ ಸಮಯದಲ್ಲಿ ಜಗತ್ತು ಆರ್ಥಿಕ ಬಿಕ್ಕಟ್ಟು ಎದುರಿಸಿದಾಗ ಕೇಂದ್ರ ಬ್ಯಾಂಕ್ ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ. ಮುಂದುವರಿಯುತ್ತಿರುವ ದೇಶಗಳು ಶತಮಾನದ ಸಮಸ್ಯೆಯ ಪರಿಣಾಮಗಳನ್ನು ಇಂದಿಗೂ ಎದುರಿಸುತ್ತಿವೆ. ಭೌಗೋಳಿಕ ರಾಜಕೀಯ ಒತ್ತಡ ಹೆಚ್ಚಿದೆ, ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿ ಏರುಪೇರಾಗಿದೆ. ಆಹಾರ ಧಾನ್ಯಗಳ ಬೆಲೆ ಏರಿಕೆಯಾಗಿದೆ. ಇಂಧನ ಭದ್ರತೆಯ ಕೊರತೆ ಎದುರಾಗಿದೆ. ಈ ಸಮಸ್ಯೆಗಳ ಬಗ್ಗೆ ಜಾಗತಿಕ ವಲಯ ಕಾಳಜಿ ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು.
ವಿಶ್ವದ ದುರ್ಬಲ ಸಮುದಾಯಗಳ ಏಳ್ಗೆಯತ್ತ ಗಮನ ಹರಿಸಬೇಕಾಗಿದೆ. ಎಲ್ಲರನ್ನೂ ಒಳಗೊಳ್ಳುವ ಆರ್ಥಿಕತೆಗೆ ಒತ್ತು ನೀಡುವ ಮೂಲಕ ಜಾಗತಿಕ ಆರ್ಥಿಕತೆಯ ಮೇಲೆ ಜನರ ವಿಶ್ವಾಸವನ್ನು ಪುನಃ ಗಳಿಸಬಹುದಾಗಿದೆ. ಈ ಬಾರಿಯ ಜಿ-20 ಆಶಯ ಕೂಡ ಇದೇ ಆಗಿದ್ದು, ಒಂದು ಜಗತ್ತು, ಒಂದು ಕುಟುಂಬ, ಒಂದು ಭವಿಷ್ಯ ಎನ್ನುವ ಘೋಷವಾಕ್ಯದ ಮೇಲೆ ರೂಪುಗೊಂಡಿದೆ. ಈ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಹವಾಮಾನ ಬದಲಾವಣೆ, ಅಧಿಕ ಸಾಲದಂತಹ ಹಲವು ಜಾಗತಿಕ ಸವಾಲುಗಳನ್ನು ಎದುರಿಸಲು ಬಹುರಾಷ್ಟ್ರೀಯ ಹಾಗೂ ಅಭಿವೃದ್ಧಿ ಹೊಂದಿದ ಬ್ಯಾಂಕುಗಳ ಬಲವರ್ಧನೆ ಅಗತ್ಯವಾಗಿದ್ದು, ಸಾಮೂಹಿಕ ಪ್ರಯತ್ನದಿಂದ ಇದನ್ನು ಸಾಧಿಸಬಹುದಾಗಿದೆ ಎಂದು ಹೇಳಿದರು.
ಹಣಕಾಸು ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಮಾಡುವ ಮೂಲಕ ಪರಿವರ್ತನೆ ತರಲಾಗಿದೆ. ಇತ್ತೀಚೆಗೆ ಡಿಜಿಟಲ್ ವಲಯ ಅಸ್ಥಿರತೆ ಮತ್ತು ದುರುಪಯೋಗವಾಗುತ್ತಿರುವ ಅಪಾಯ ಎದುರಾಗಿದ್ದು, ಇದನ್ನು ತಂತ್ರಜ್ಞಾನದ ಮೂಲಕ ಪರಿಹರಿಸಿಕೊಳ್ಳಲು ಯತ್ನಿಸಬೇಕಾಗಿದೆ. ಭಾರತ ಸುಭದ್ರ ಹಾಗೂ ಸುರಕ್ಷಿತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಸರ್ವರನ್ನೂ ಹಣಕಾಸು ವ್ಯವಸ್ಥೆಗೆ ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿದರು.
ಜಿ-20 ಅಧ್ಯಕ್ಷ ಸ್ಥಾನ ಪಡೆದ ನಂತರ ವಸುದೈವ ಕುಟುಂಬಕಂ ಧ್ಯೇಯೋದ್ದೇಶದಿಂದ ಮುಂದಿನ ಭವಿಷ್ಯವನ್ನು ಗಮನಿಸಿ, ಆ ನಿಟ್ಟಿನಲ್ಲಿ ಪರಿಹಾರವನ್ನು ಕಂಡುಕೊಳ್ಳುವಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪ್ರಾಮುಖ್ಯತೆಯನ್ನು ಬಳಕೆ ಮಾಡಿಕೊಂಡು ಅದರ ಪ್ರತಿಫಲ ಎಲ್ಲರಿಗೂ ದೊರೆಯುವಂತಾಗಬೇಕು ಎಂದು ಹೇಳಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಅತ್ಯಂತ ಕಠಿಣವಾದ ಸವಾಲುಗಳಿಗೆ ಸಮಗ್ರ ಪರಿಹಾರಗಳನ್ನು ಕೇಂದ್ರೀಕರಿಸುವ ಮತ್ತು ಅನ್ವೇಷಿಸುವ ಅಗತ್ಯವಿದೆ ಎಂದು ಹೇಳಿದರು. ಜಿ-20 ಸದಸ್ಯರ ಪೂರಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಜಗತ್ತಿನಾದ್ಯಂತ ಆರ್ಥಿಕ ಬೆಳವಣಿಗೆಗೆ ಸ್ಪಂಧಿಸಬೇಕು ಎಂದು ಅವರು ಕರೆ ನೀಡಿದರು. ಜಾಗತಿಕ ಪ್ರಮುಖ ಉದ್ದೇಶ ಹಾಗೂ ಆಲೋಚನೆಗಳು ಸುಧಾರಣೆಗೆ ಪೂರಕವಾಗಿರಬೇಕು. ಸಾಮೂಹಿಕ ಒಳಿತಿಗಾಗಿ ಶಕ್ತಿ ಮತ್ತು ಜಾಗತಿಕ ತಜ್ಞರ ಅಭಿಪ್ರಾಯ ಹಂಚಿಕೊಳ್ಳಲು ಇದು ವೇದಿಕೆಯಾಗಿದೆ ಎಂದರು.
ಜಿ-20 ವೇದಿಕೆ ಜಗತ್ತು ಎದುರಿಸುತ್ತಿರುವ ಹಲವು ಪ್ರಮುಖ ಸವಾಲುಗಳಿಗೆ ಸಮಗ್ರ ಪರಿಹಾರಗಳನ್ನು ನೀಡುವ ಕುರಿತು ಆದ್ಯತೆ ನೀಡಲಿದೆ. ಈ ಮೂಲಕ ಜಿ-20 ವಿಶ್ವದ ಜನ ಜೀವನವನ್ನು ಪರಿವರ್ತನೆಗೊಳಿಸಬಲ್ಲ ಸಾಮರ್ಥ್ಯವಾಗಲಿದೆ. ಜಾಗತಿಕ ಪ್ರಮುಖ ವೀಕ್ಷಣೆಗಾರನಂತೆ, ಹೊಸ ವಿಚಾರಗಳ ಹುಟ್ಟಿಗೆ ಕಾರಣವಾಗಬಲ್ಲ, ಸರ್ವರ ಅಭ್ಯುದಯಕ್ಕಾಗಿ ಕೆಲಸ ಮಾಡುವ ಶಕ್ತಿಯಾಗಿ ಕೆಲಸ ನಿರ್ವಹಿಸಲಿದೆ ಎಂದು ಹೇಳಿದರು.
ಅಭಿವೃದ್ಧಿಯಾಗುತ್ತಿರುವ ದೇಶಗಳಿಗೆ ಬೆಂಬಲ ವ್ಯವಸ್ಥೆ ರೂಪಿಸುವುದು ಜಿ-20 ಆದ್ಯತೆಯಾಗಿದೆ. ಭಾರತದ ಜಿ-20 ಅಧ್ಯಕ್ಷತೆ ವಿವಿಧ ಸಮಸ್ಯೆಗಳನ್ನು ಶಮನಗೊಳಿಸುವ, ಸಾಮರಸ್ಯ ಮತ್ತು ಮಾನವ ಕೇಂದ್ರಿತ ಜಾಗತೀಕರಣದ ಮಾದರಿಯಾಗಿ ಹೊಮ್ಮಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ ಎಂದು ಹೇಳಿದರು.
ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳಿಗೆ ಅಭಿವೃದ್ಧಿಶೀಲ ರಾಷ್ಟçಗಳ ಕಾಳಜಿ ಆಕಾಂಕ್ಷೆಗಳು ಕೇಂದ್ರವಾಗಿರಬೇಕು ಎಂದು ಸೂಚಿಸಿದರು. ಜಿ-20 ಸದಸ್ಯ ರಾಷ್ಟ್ರಗಳ 500 ಪ್ರತಿನಿಧಿಗಳು, ಆಹ್ವಾನಿತರು, ಅಂತಾರಾಷ್ಟ್ರೀಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಹಣಕಾಸು, ತೆರಿಗೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ