ತಮಿಳುನಾಡು :
2010 ರಲ್ಲಿ ಬಿಡುಗಡೆಯಾದ ರೋಬೋ ಸಿನಿಮಾ ವಿಚಾರವಾಗಿ ಸಾಕಷ್ಟು ಗೊಂದಲಗಳಿದ್ದವು ಆದರೆ ಅವುಗಳಿಗೆಲ್ಲಾ ಇತೀಶ್ರೀ ಹಾಡಿದ್ದ ಚಿತ್ರ ತಂಡ ಒಂದು ವಿಚಾರವಾಗಿ ವಿಫಲವಾಗಿತ್ತು ಈಗ ಅದೇ ನಿರ್ಧೇಶಕ ಶಂಕರ್ ಅವರಿಗೆ ಮುಳುವಾಗಿದೆ ಎನ್ನಲಾಗಿದೆ. ಆಗಿನ ಕಾಲಕ್ಕೆ ಆ ಸಿನಿಮಾ ಭಾರತದಲ್ಲಿಯೇ ಭಾರಿ ಬಜೆಟ್ ಸಿನಿಮಾ. ಬಿಡುಗಡೆ ಆದ ಬಳಿಕ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ‘ರೋಬೊ’ ಸಿನಿಮಾ ಗ್ರಾಫಿಕ್ಸ್ ಪ್ರೇಕ್ಷಕರ ಮೈನವಿರೇಳಿಸಿತ್ತು.
ಆಗಿನ ಕಾಲಕ್ಕೆ ‘ರೋಬೊ’ ಸಿನಿಮಾ ಸುಮಾರು 500 ಕೋಟಿಗೂ ಹೆಚ್ಚಿನ ಹಣ ಗಳಿಸಿತ್ತು. ಹಲವಾರು ದಾಖಲೆಗಳನ್ನು ಆ ಸಿನಿಮಾ ಆಗಿನ ಸಮಯದಲ್ಲಿ ಮಾಡಿತ್ತು. ಶಂಕರ್ ಹೆಸರು ಹಾಲಿವುಡ್ನಲ್ಲೂ ಕೇಳುವಂತೆ ಮಾಡಿತ್ತು ‘ರೋಬೊ’ ಸಿನಿಮಾ. ಆದರೆ ಈಗ ಅದೇ ಸಿನಿಮಾದಿಂದಾಗಿ ಶಂಕರ್ ಮೇಲೆ ಪ್ರಕರಣ ದಾಖಲಾಗಿದೆ. ಮಾತ್ರವಲ್ಲದೆ ಶಂಕರ್ ಆಸ್ತಿಯನ್ನು ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿದೆ.
ಶಂಕರ್ ಅವರ ‘ರೋಬೊ’ ಸಿನಿಮಾ ತಮ್ಮ ರಚನೆಯ ‘ಜಿಗುಬಾ’ ಹೆಸರಿನ ಕಾದಂಬರಿ ಆಧರಿಸಿದ್ದು ಎಂದು ಬರಹಗಾರ ಅರುರ್ ತಮಿನಾದನ್ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು, ಇದೀಗ ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆಯಾದ ಇಡಿ (ಜಾರಿ ನಿರ್ದೇಶನಾಲಯ) ಈ ಪ್ರಕರಣದಲ್ಲಿ ಶಂಕರ್ಗೆ ಸೇರಿದ 10 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಶಂಕರ್ ಅವರ ಕೆಲ ಸ್ಥಿರಾಸ್ತಿಯನ್ನು ಇಡಿ ತನ್ನ ವಶಕ್ಕೆ ಪಡೆದುಕೊಂಡಿದೆ. ಪ್ರಕರಣದ ವಿಚಾರಣೆ ಇನ್ನೂ ಚಾಲ್ತಿಯಲ್ಲಿದ್ದು, ಪ್ರಕರಣ ಯಾರ ಪರ ಆಗಲಿದೆ ಕಾದು ನೋಡಬೇಕಿದೆ.
‘ರೋಬೊ’ ಸಿನಿಮಾದ ಕತೆ ಹಾಗೂ ಚಿತ್ರಕತೆಯನ್ನು ಶಂಕರ್ ಜೊತೆಗೆ ಸುಜಾತ ಸೇರಿ ರಚಿಸಿದ್ದರು. ಸುಜಾತಾ, ಖ್ಯಾತ ಸಿನಿಮಾ ಕತೆಗಾರರಾಗಿದ್ದು, ಶಂಕರ್ರ ಹಲವಾರು ಸಿನಿಮಾಗಳಿಗೆ ಕತೆ, ಚಿತ್ರಕತೆಯನ್ನು ಒದಗಿಸಿರುವುದು ಅವರೇ. ಇತ್ತೀಚೆಗಷ್ಟೆ ಶಂಕರ್ ಅವರಿಂದ ಸುಜಾತಾ ದೂರಾಗಿದ್ದಾರೆ. ಸುಜಾತಾ ದೂರಾದ ಬಳಿಕ ಶಂಕರ್ ನಿರ್ದೇಶನ ಮಾಡಿದ ಎರಡು ಸಿನಿಮಾಗಳು ಫ್ಲಾಪ್ ಆಗಿವೆ. ‘ರೋಬೊ’ ಸಿನಿಮಾದ ಕತೆ ರಚನೆಯಲ್ಲಿ ಸುಜಾತಾ ಪಾತ್ರವೂ ಇದೆ. ಆದರೆ ಅವರಿಗೆ ಸ್ಟೋರಿ ಕ್ರೆಡಿಟ್ ನೀಡಿಲ್ಲವಾದ್ದರಿಂದ, ಇದೀಗ ಶಂಕರ್ ಮೇಲೆ ಮಾತ್ರವೇ ಪ್ರಕರಣ ದಾಖಲಾಗಿದೆ.
2010 ರಲ್ಲಿ ‘ರೋಬೊ’ ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ಶಂಕರ್ಗೆ 11.5 ಕೋಟಿ ಸಂಭಾವನೆ ದೊರೆತಿತ್ತಂತೆ. ಅದೇ ಕಾರಣಕ್ಕೆ ಈಗ ಶಂಕರ್ಗೆ ಸೇರಿದ ಸುಮಾರು 10 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರಸ್ತುತ ಸಿನಿಮಾ ವಿಷಯಗಳಿಗೆ ಬರುವುದಾದರೆ ಶಂಕರ್ ನಿರ್ದೇಶನದ ‘ಇಂಡಿಯನ್ 2’ ಮತ್ತು ‘ಗೇಮ್ ಚೇಂಜರ್’ ಸಿನಿಮಾಗಳು ಒಂದರ ಹಿಂದೊಂದರಂತೆ ಫ್ಲಾಪ್ ಆಗಿವೆ. ಒಂದು ಕಾಲದ ಬ್ಲಾಕ್ ಬಸ್ಟರ್ ನಿರ್ದೇಶಕ ಆಗಿದ್ದ ಶಂಕರ್ ಈಗ ಹಿಟ್ ಸಿನಿಮಾ ನೀಡಲು ಕಷ್ಟಪಡುತ್ತಿದ್ದಾರೆ.
