ಮುಂಬೈ:
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಮನೆ ಸೇರಿದಂತೆ ಹಲವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಅಶ್ಲೀಲ ವಿಡಿಯೋ ರೆಕಾರ್ಡಿಂಗ್ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಅಧಿಕಾರಿಗಳು ಮುಂಬೈ ಹಾಗೂ ಉತ್ತರಪ್ರದೇಶದ ಕೆಲವು ಭಾಗಗಳಲ್ಲಿ ಸುಮಾರು 15 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿದು ಬಂದಿದೆ.
ಈ ಹಿಂದೆಯೂ ಒಮ್ಮೆ ರಾಜ್ ಕುಂದ್ರಾ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಇಡಿ ಇಲಾಖೆ ರಾಜ್ ಕುಂದ್ರಾಗೆ ಸೇರಿದ 97.7 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಅದರಲ್ಲಿ ಜುಹುವಿನ ಐಷಾರಾಮಿ ಮನೆ, ಪುಣೆಯ ಮನೆ ಹಾಗೂ ಕೆಲವು ಈಕ್ವಿಟಿ ಷೇರುಗಳು ಸಹ ಇದ್ದವು. 6600 ಕೋಟಿ ಮೌಲ್ಯದ ಬಿಟ್ಕಾಯ್ನ್ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿತ್ತು. ನಂತರ ದಂಪತಿಗಳು ಜುಹುದಲ್ಲಿರುವ ತಮ್ಮ ನಿವಾಸ ಹಾಗೂ ಪುಣೆಯ ಫಾರ್ಮ್ ಹೌಸ್ ಖಾಲಿ ಮಾಡುವಂತೆ ಇ.ಡಿ ನೋಟೀಸ್ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಈಗ ನಡೆಸಿದ ದಾಳಿ ಹಳೆ ಕೇಸ್‌ಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ.
ಅಶ್ಲೀಲ ಸಿನಿಮಾಗಳನ್ನು ಚಿತ್ರೀಕರಿಸಿ, ಅದನ್ನು ವಿವಿಧ ಆ್ಯಪ್‌ಗಳ ಮೂಲಕ ವಿತರಣೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ರಾಜ್ ಕುಂದ್ರಾರನ್ನು 2021ರಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು. ಹಲವು ದಿನಗಳಿಂದಲೂ ಮುಂಬೈ ಪೊಲೀಸರಿಗೆ ಈ ಬಗ್ಗೆ ಅನುಮಾನವಿತ್ತು. ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ ನಂತರ ಬಂಧಿಸಿದ್ದರು.
ಮುಂಬೈನಲ್ಲಿ ಅಶ್ಲೀಲ ಸಿನಿಮಾಗಳನ್ನು ಚಿತ್ರೀಕರಿಸಿ, ಅವುಗಳನ್ನು ವಿವಿಧ ಆ್ಯಪ್‌ಗಳ ಮೂಲಕ ಹಂಚಿಕೆ ಮಾಡುತ್ತಿದ್ದಾರೆ ಎಂಬ ಅನುಮಾನ ಹಲವು ತಿಂಗಳಿನಿಂದ ಪೊಲೀಸರನ್ನು ಕಾಡುತ್ತಿತ್ತು. ಈ ಸಂಬಂಧ 2021 ರ ಫೆಬ್ರವರಿಯಲ್ಲಿ ದೂರು ದಾಖಲಾಗಿತ್ತು. ನಂತರ ರಾಜ್ ಕುಂದ್ರಾ ಪಾಲುದಾರಿಕೆಯನ್ನು ಖಚಿತಪಡಿಸಿಕೊಂಡ ಮೇಲೆ ಅವರನ್ನು ಬಂಧಿಸಲಾಗಿತ್ತು.
ಇತ್ತೀಚೆಗಷ್ಟೇ ಈ ಜೋಡಿ ಅದ್ಧೂರಿಯಾಗಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಗೆಳೆಯರನ್ನು ಕರೆಸಿ ಭರ್ಜರಿ ಪಾರ್ಟಿ ಕೊಟ್ಟಿದ್ದರು. ದಂಪತಿಗಳಿಬ್ಬರೂ ಕುದುರೆ ಗಾಡಿಯಲ್ಲಿ ನಗರ ಸುತ್ತಾಡಿ ಎಂಜಾಯ್ ಮಾಡಿದ್ದರು. ಶಿಲ್ಪಾ ಕೂಡ ತಮ್ಮ ವಿವಾಹ ವಾರ್ಷಿಕೋತ್ಸವದ ಬಗ್ಗೆ ಇನ್ಸ್ಟಾಗ್ರಾಂ ಅಲ್ಲಿ ಹಂಚಿಕೊಂಡಿದ್ದರು.