ಶಾಸಕ ವಿರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ….!

ಚಿತ್ರದುರ್ಗ:

    ವಿದೇಶಿ ಕರೆನ್ಸಿ ಹಾಗು ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಸದ್ಯ ಜಾರಿ ನಿರ್ದೇಶನಾಲಯ  ವಶದಲ್ಲಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಇಡಿ ಅಧಿಕಾರಿಗಳು ಮತ್ತೆ ದಾಳಿಯನ್ನು ನಡೆಸಿದ್ದು, 6 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ವೀರೇಂದ್ರ ಹೇಳಿಕೆ ಆಧರಿಸಿ ಅವರ ಮನೆ ಮೇಲೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅವರ ಮನೆಯಲ್ಲಿರುವ ಐಶಾರಾಮಿ ಕಾರುಗಳ ಬಗ್ಗೆ ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಮನೆ ಮಾತ್ರವಲ್ಲದೇ ಶಾಸಕ ವೀರೇಂದ್ರ ಪಪ್ಪಿಯ ಬ್ಯಾಂಕ್ ಖಾತೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ.

    ಚಳ್ಳಕೆರೆ ನಗರದ ಕೋಟೆಕ್ ಮಹೇಂದ್ರ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್‌ಗೆ ಇ.ಡಿ ಅಧಿಕಾರಿಗಳು ತೆರಳಿದ್ದರು. ಆ ಬ್ಯಾಂಕ್‌ನಲ್ಲಿ ವೀರೇಂದ್ರ ಪಪ್ಪಿ ಹಾಗೂ ಅವರ ಕುಟುಂಬ ಸದಸ್ಯರ ಹಣ ವರ್ಗಾವಣೆ ಬಗ್ಗೆ ಮಾಹಿತಿ, ದಾಖಲೆಯನ್ನ ಕೂಡ ಕಲೆ ಹಾಕಿದ್ದು, 17 ಬ್ಯಾಂಕ್ ಖಾತೆಗಳ ಮೂಲಕ ಆಗಿರುವ ಹಣಕಾಸು ವರ್ಗಾವಣೆ ಬಗ್ಗೆ ಮಾಹಿತಿ, ದಾಖಲೆಯನ್ನು ಸಂಗ್ರಹಿಸಿದ್ದಾರೆ. ಜೊತೆಗೆ ಬೆಟ್ಟಿಂಗ್ ಆಪ್‌ಗಳ ಮೂಲಕ ಗಳಿಸಿದ ಹಣವನ್ನು ಈ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡುವ ಮೂಲಕ ಅಕ್ರಮ ವ್ಯವಹಾರ ನಡೆಸಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಿದ್ದಾರೆ.

   ಆಗಸ್ಟ್ 22ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ವೀರೇಂದ್ರ ಪಪ್ಪಿ ನಿವಾಸ ಮೇಲೆ ಮುಂಜಾನೆ 5 ಗಂಟೆಗೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಮಧ್ಯರಾತ್ರಿವರೆಗೂ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಅಂದು ಪಪ್ಪಿ ಮನೆಯಲ್ಲಿ ಕೋಟಿ ಕೋಟಿ ಹಣ ಜೊತೆ ಚಿನ್ನಾಭರಣ ವಿದೇಶಿ ಕರೆನ್ಸಿಯನ್ನ ಇಡಿ ವಶಕ್ಕೆ ಪಡೆದಿತ್ತು. 

   ಸೈಬರ್‌ ವಂಚನೆಯ ಹಣವನ್ನು ಬಳಸಿಕೊಂಡು ಕ್ರೆಡಿಟ್‌ ಕಾರ್ಡ್ ಪಾವತಿ ತೋರಿಸುವ ಮುಖಾಂತರ ವೀರೇಂದ್ರಗೆ ಸೇರಿದ ಕ್ಯಾಸಿನೋಗಳ ನಗದು ಹಣವನ್ನು ಕಾನೂನು ಬದ್ಧ ಆದಾಯವಾಗಿ ಪರಿವರ್ತಿಸಿರುವ ಶಂಕೆಯೂ ವ್ಯಕ್ತವಾಗಿದೆ. ಇ.ಡಿ.ಶೋಧನೆ ವೇಳೆ ವೀರೇಂದ್ರ ಸಾಗರೋತ್ತರ ವ್ಯವಹಾರ ನಡೆಸುತ್ತಿರುವ ಸಂಬಂಧ ಕೆಲ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಹೀಗಾಗಿ ಇ.ಡಿ. ಅಧಿಕಾರಿಗಳು ಈ ಶೆಲ್‌ ಕಂಪನಿಗಳು ಹಾಗೂ ಸಾಗರೋತ್ತರ ವ್ಯವಹಾರದ ಬಗ್ಗೆ ಕೆ.ಸಿ.ವೀರೇಂದ್ರ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Recent Articles

spot_img

Related Stories

Share via
Copy link