ರಾಂಚಿ:
ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರನ್ನು ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯ ಮುಂದಾಗಿದ್ದು, ಸೋಮವಾರವೇ ಸೋರೆನ್ ನಿವಾಸಕ್ಕೆ ಆಗಮಿಸಿದ್ದಾರೆ.
ಇಡಿ ಅಧಿಕಾರಿಗಳು ತಮ್ಮ ನಿವಾಸಕ್ಕೆ ಆಗಮಿಸಿದ ಬೆನ್ನಲ್ಲೇ ದಿಢೀರ್ ನಾಪತ್ತೆಯಾಗಿದ್ದ ಹೇಮಂತ್ ಸೋರೆನ್ ಅವರು, ಇಂದು ಮಧ್ಯಾಹ್ನ ರಾಂಚಿಯಲ್ಲಿ ಪ್ರತ್ಯಕ್ಷವಾಗಿದ್ದು, ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಸಿಎಂ ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ ಸೋರೆನ್ ಅವರು ಸಹ ಭಾಗಿಯಾಗಿರುವುದು ತೀವ್ರ ಕೂತುಹಲಕ್ಕೆ ಕಾರಣವಾಗಿದೆ.
ಸೋರೆನ್ ಅವರು ಇಡಿಗೆ ಕಳುಹಿಸಿ ಇ-ಮೇಲ್ ನಲ್ಲಿ ಜನವರಿ 31 ರಂದು ಮಧ್ಯಾಹ್ನ 1 ಗಂಟೆಗೆ ತಮ್ಮ ನಿವಾಸದಲ್ಲಿ ಹೇಳಿಕೆ ನೀಡಲು ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ಇಡಿ ಅಧಿಕಾರಿಗಳು ನಾಳೆ ಸೋರೆನ್ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಅಲ್ಲದೆ ವಿಚಾರಣೆ ಬಳಿಕ ಅವರನ್ನು ಬಂಧಿಸುವ ಸಾಧ್ಯತೆ ಇದೆ.
ಒಂದು ವೇಳೆ ಸೋರೆನ್ ಅವರನ್ನು ಇಡಿ ಬಂಧಿಸಿದರೆ, ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಅವರ ಪತ್ನಿ ಕಲ್ಪನಾ ಅವರು ಜಾರ್ಖಂಡ್ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಆಡಳಿತರೂಢ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ), ತನ್ನ ಎಲ್ಲಾ ಶಾಸಕರಿಗೆ ರಾಂಚಿಯಲ್ಲೇ ಇರುವಂತೆ ಸೂಚನೆ ನೀಡಿದೆ. ಅಲ್ಲದೆ ಸಂಜೆ 4.30ಕ್ಕೆ ಸುದ್ದಿಗೋಷ್ಠಿ ಕರೆದಿದೆ.
ಸೋರೆನ್ ಅವರು ಭೂ ಹಗರಣ ಸಂಬಂಧ ಇಡಿಯಿಂದ ಎಂಟು ಬಾರಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಇಡಿ, ಸೋರೆನ್ ಅವರಿಗೆ ತಮ್ಮ ಹೇಳಿಕೆ ದಾಖಲಿಸುವಂತೆ ಈ ಹಿಂದೆ ಆಗಸ್ಟ್ 14, ಆಗಸ್ಟ್ 24, ಸೆಪ್ಟೆಂಬರ್ 9, ಸೆಪ್ಟೆಂಬರ್ 23, ಅಕ್ಟೋಬರ್ 4, ಡಿಸೆಂಬರ್ 12, ಡಿಸೆಂಬರ್ 29 ಮತ್ತು ಜನವರಿ 13 ರಂದು ಸಮನ್ಸ್ ನೀಡಿತ್ತು.