ಶಿರಸಿ:
ಉತ್ತರ ಕನ್ನಡ ಜಿಲ್ಲೆಯ ಶಿರೂರು ಭೂಕುಸಿತದಿಂದ ಮೃತಪಟ್ಟವರಿಗೆ ಇದುವರೆಗೂ ಸರಕಾರದಿಂದ ಪರಿಪೂರ್ಣ ಪರಿಹಾರ ನೀಡದಿರುವುದನ್ನು ರಾಷ್ಟ್ರೀಯ ಈಡಿಗ ಮಹಾಮಂಡಳಿ ಅಧ್ಯಕ್ಷರೂ ಆದ ಚಿತ್ತಾಪುರ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಖಂಡಿಸಿದ್ದಾರೆ. ಶಿರೂರು ಗುಡ್ಡ ಕುಸಿತಕ್ಕೆ ಸಂಪೂರ್ಣವಾಗಿ ಗುತ್ತಿಗೆದಾರ ಕಂಪನಿ ಐ ಆರ್ ಬಿ ಕಾರಣವಾಗಿದ್ದು ಅವರ ಮೇಲೆ ಯಾವುದೇ ಕ್ರಮ ಸರಕಾರದಿಂದ ಆಗಿಲ್ಲ.
ಕಂಪನಿಯ ಅವಿವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪ್ರಾಣ ಹಾನಿ, ಆಸ್ತಿ ಹಾನಿ ಸಂಭವಿಸಿದೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರ ಮಂಕಾಳ ವೈದ್ಯರು ಈ ಬಗ್ಗೆ ದಿವ್ಯ ನಿರ್ಲಕ್ಷ ತೋರಿರುವುದು ಖoಡನೀಯ ಎಂದು ಸ್ವಾಮೀಜಿಗಳು ಹೇಳಿದರು. ಅವರಿಂದು ಶಿರಸಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸಮಾಜದ ಆರು ಶಾಸಕರು, ಒಬ್ಬ ಮಂತ್ರಿ ಇದ್ದರೂ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ದೂರಿದರು.
ಸಮಾಜದ ಜನ ಸಂಘಟಿತವಾದರೆ ಹಕ್ಕುಗಳನ್ನು ಪಡೆಯಬಹುದು ಎಂದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಾಜದ ಸಂಘಟನೆಗೆ ತಾವು ಶ್ರಮಿಸುತ್ತಿದ್ದು ಇದೇ ಬರುವ ಸೆಪ್ಟೆಂಬರ್ ಮೂರರಂದು ಸಿದ್ದಾಪುರದ ಬಾಲ ಭವನದಲ್ಲಿ ಚಿಂತನ ಶಿಬಿರ ಸಂಘಟಿಸಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸ್ವಾಮೀಜಿಗಳು ಕರೆ ನೀಡಿದರು. ಉತ್ತರ ಕನ್ನಡ ಜಿಲ್ಲಾ ಈಡಿಗ ಮಹಾಮಂಡಳ ಅಧ್ಯಕ್ಷ ದೇವರಾಜ ಡಿ ನಾಯ್ಕ್ ಮಧುರವಳ್ಳಿ,ಜೆಡಿಎಸ್ ತಾಲೂಕ ಅಧ್ಯಕ್ಷ ಶೇಖರ ನಾಯ್ಕ್ ಉಪಸ್ಥಿತರಿದ್ದರು.








