ಈಜಿಪುರ ಫ್ಲೈ ಓವರ್‌ ಮುಗಿಸಲು ಮತ್ತೊಂದು ಗಡುವು…..!

ಬೆಂಗಳೂರು:

    ಉದ್ಯಾನ ನಗರಿ ಬೆಂಗಳೂರಿನ ಅಪೂರ್ಣ ಕಾಮಗಾರಿ ಯಾವುದು? ಎಂದರೆ ಎಲ್ಲರೂ ಕೈ ತೋರಿಸುವುದು ಈಜಿಪುರ ಫ್ಲೈ ಓವರ್ ಕಡೆಗೆ. ಈ ಕಾಮಗಾರಿ ಬೇಗ ಮುಗಿಸಿ ಎಂದು ಜನರು ಆಕ್ರೋಶಗೊಂಡಿದ್ದು, ನೆಟ್ಟಿಗರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಹ ಮನವಿ ಸಲ್ಲಿಸಿದ್ದಾರೆ.

    2017ರಲ್ಲಿ ಆರಂಭವಾದ ಈಜಿಪುರ ಫ್ಲೈ ಓವರ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಲವಾರು ಗಡುವುಗಳನ್ನು ಬಿಬಿಎಂಪಿ ನೀಡುತ್ತಲೇ ಬಂದಿದೆ. ಸದ್ಯದ ಮಾಹಿತಿ ಪ್ರಕಾರ 2026ರ ಮಾರ್ಚ್‌ಗೆ ಕಾಮಗಾರಿ ಮುಗಿಯಲಿದೆ.

   ಎರಡು ದಿನಗಳ ಹಿಂದೆ ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಈಜಿಪುರ ಫ್ಲೈ ಓವರ್ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಗುತ್ತಿಗೆ ಪಡೆದ ಕಂಪನಿ ಅಧಿಕಾರಿಗಳಿಗೆ 2026ರ ಮಾರ್ಚ್‌ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಡಿಸೆಂಬರ್ ಗಡುವು ನೀಡಲಾಗಿತ್ತು:

   2.38 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್ ಕಾಮಗಾರಿ ಈ ವರ್ಷದ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಆದರೆ ಈಗ ಆ ಗಡುವು ಮತ್ತೆ ಮುಂದೂಡಿಕೆಯಾಗಿದೆ.

   ಯೋಜನೆಗೆ 762 ಸೆಗ್ಮೆಂಟ್‌ಗಳನ್ನು ಜೋಡಿಸಬೇಕಿದೆ. ಇವುಗಳಲ್ಲಿ 437 ಈಗಾಗಲೇ ಜೋಡಿಸಲಾಗಿದೆ. 325 ಸೆಗ್ಮೆಂಟ್‌ಗಳನ್ನು ಇನ್ನೂ ಸಹ ನಿರ್ಮಾಣ ಮಾಡಬೇಕಿದೆ. ಪ್ರತಿ ತಿಂಗಳು ಸಹ ಯೋಜನೆಯ ಕುರಿತು ವರದಿ ನೀಡಬೇಕು ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

   ಸೆಂಟ್ ಜಾನ್ಸ್ ಸಿಗ್ನಲ್ ಮತ್ತು ಸೆಂಟ್ ಜಾನ್ಸ್ ಹಾಸ್ಟೆಲ್‌ಗಳಲ್ಲಿ ಕಾಮಗಾರಿ ನಡೆಸಲು ಭೂಮಿ ಅಗತ್ಯವಿದ್ದು, ಇದನ್ನು ಬೇಗ ಸ್ವಾಧೀನಪಡಿಸಿಕೊಳ್ಳಲು ಸೂಚನೆ ಕೊಡಲಾಗಿದೆ. ಎರಡು ಬಾರಿ ಟೆಂಡರ್ ರದ್ದು ಮಾಡಿದ್ದ ಕಾರಣ ಯೋಜನೆ ವಿಳಂಬವಾಗಿತ್ತು. ಈಗ ಯೋಜನೆ ವಿನ್ಯಾಸ ಅಂತಿಮಗೊಳಿಸಿ ಕಾಮಗಾರಿ ನಡೆಸಲಾಗುತ್ತಿದೆ.

   ಗುತ್ತಿಗೆದಾರರು ಈಜಿಪುರ ಫ್ಲೈ ಓವರ್ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಬಿಬಿಎಂಪಿ 2022ರಲ್ಲಿ ಆ ಗುತ್ತಿಗೆ ರದ್ದುಪಡಿಸಿತ್ತು. ಹೈಕೋರ್ಟ್‌ ಹೊಸ ಟೆಂಡರ್ ಕರೆದು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿಗೆ ಸೂಚನೆ ನೀಡಿತ್ತು.

   2014ರಲ್ಲಿ ಈಜಿಪುರ ಫ್ಲೈ ಓವರ್ ಕಾಮಗಾರಿ ಯೋಜನೆ ರೂಪಗೊಂಡಿತು. 2017ರಲ್ಲಿ 157.66 ಕೋಟಿ ರೂ. ವೆಚ್ಚದ ಟೆಂಡರ್ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಗೆ ನೀಡಿ, 2019ರಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿತ್ತು.

   ನಗರದ ಕೋರಮಂಗಲ ಹೊರ ವರ್ತುಲ ರಸ್ತೆಯ ಎಲಿವೇಟೆಡ್ ಕಾಮಗಾರಿ ಇದಾಗಿದೆ. ಈ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಲಾಗಿತ್ತು.

   ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬಿಟಿಎಂ ಲೇಔಟ್ ಶಾಸಕ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹ ಈಜಿಪುರ ಫ್ಲೈ ಓವರ್ ಕಾಮಗಾರಿಯನ್ನು ಆಗಾಗ ಪರಿಶೀಲನೆ ಮಾಡುತ್ತಿದ್ದಾರೆ. ಆದರೆ ವಿವಿಧ ಕಾರಣಕ್ಕೆ ತಡವಾಗಿದ್ದ ಕಾಮಗಾರಿ ಈ ವರ್ಷದ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವುದಿಲ್ಲ ಎಂಬುದು ಈಗ ತಿಳಿದುಬಂದಿದೆ.

  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೋರಮಂಗಲದ ಕೇಂದ್ರೀಯ ಸದನ್ ಮತ್ತು ಈಜಿಪುರವನ್ನು ಸಂಪರ್ಕಿಸಲು ಈ ಫ್ಲೈ ಓವರ್ ಯೋಜನೆ ರೂಪಿಸಿತ್ತು. ಪಿಲ್ಲರ್‌ಗಳು ನಿರ್ಮಾಣವಾದ ಬಳಿಕ ಟೆಂಡರ್ ಪಡೆದವರು ಬದಲಾವಣೆಯಾಗಿದ್ದರಿಂದ ಯೋಜನೆ ಕುಂಟುತ್ತಲೇ ಸಾಗುತ್ತಿದೆ.

Recent Articles

spot_img

Related Stories

Share via
Copy link