ನವದೆಹಲಿ:
ದೆಹಲಿ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿ ಅವರಿಗೆ ಚುನಾವಣಾ ಆಯೋಗ ಶುಕ್ರವಾರ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಪಕ್ಷ ಸೇರಲು ಬಿಜೆಪಿ ತನ್ನನ್ನು ಆಪ್ತರ ಮೂಲಕ ಸಂಪರ್ಕಿಸಿದೆ ಎಂಬ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.
ಬಿಜೆಪಿ ಸೇರುವಂತೆ ಆಪ್ತರ ಮೂಲಕ ನನ್ನನ್ನು ಸಂಪರ್ಕಿಸಲಾಗಿದ್ದು, ಬಿಜೆಪಿಗೆ ಸೇರದೆ ಹೋದರೆ ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಬೇಕಾಗುತ್ತದೆ ಎಂಬ ಅತಿಶಿ ಅವರ ಹೇಳಿಕೆ ವಿರುದ್ಧ ಬಿಜೆಪಿ ಈ ಹಿಂದೆ ಚುನಾವಣಾ ಆಯೋಗದ ಮೊರೆ ಹೋಗಿತ್ತು.
ಏಪ್ರಿಲ್ 2ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅತಿಶಿ, ಆಪ್ತರ ಮೂಲಕ ಬಿಜೆಪಿ ಸೇರಲು ನನ್ನನ್ನು ಸಂಪರ್ಕಿಸಲಾಗಿತ್ತು. ಈ ವೇಳೆ ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ಬಿಜೆಪಿಗೆ ಸೇರಬಹುದು ಅಥವಾ ಮುಂದಿನ ತಿಂಗಳೊಳಗೆ ಬಂಧನಕ್ಕೀಡಾಗಬಹುದು. ಪ್ರತಿಯೊಬ್ಬ ಆಪ್ ನಾಯಕರನ್ನು ಜೈಲಿಗೆ ಹಾಕಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಆಪ್ತರೊಬ್ಬರು ತಿಳಿಸಿದ್ದಾಗಿ ಆರೋಪಿಸಿದ್ದರು.
ಚುನಾವಣಾ ಆಯೋಗವು ಹೊರಡಿಸಿದ ನೋಟಿಸ್‌ನಲ್ಲಿ, ನೀವು ದೆಹಲಿ ಸರ್ಕಾರದ ಸಚಿವೆಯಾಗಿದ್ದೀರಿ ಮತ್ತು ಪಕ್ಷದ ರಾಷ್ಟ್ರೀಯ ನಾಯಕಿಯಾಗಿದ್ದೀರಿ. ಮತದಾರರು ತಮ್ಮ ನಾಯಕರು ಸಾರ್ವಜನಿಕ ವೇದಿಕೆಯಿಂದ ಏನು ಹೇಳಿದರೂ ನಂಬುತ್ತಾರೆ. ಯಾವುದೇ ನಾಯಕರು ನೀಡಿದ ಹೇಳಿಕೆಗಳು ಜನರ ಮೇಲೆ ಪರಿಣಾಮ ಬೀರುತ್ತವೆ ಎಂದಿದೆ.
ಎಎಪಿ ನಾಯಕಿ ನೀಡಿರುವ ಹೇಳಿಕೆಗಳು ವಾಸ್ತವಿಕ ಸಾಕ್ಷ್ಯವನ್ನು ಆಧರಿಸಿರಬೇಕು. ಈ ಹೇಳಿಕೆಗಳ ಸತ್ಯಾಸತ್ಯತೆಯ ಬಗ್ಗೆ ಸಂದೇಹಗಳು ಉದ್ಭವಿಸಿದಾಗ, ಅವರು ಅವುಗಳನ್ನು ದೃಢೀಕರಿಸಲು ಆಧಾರವನ್ನು ನೀಡಬೇಕಾಗುತ್ತದೆ ಎಂದಿದೆ.
ಸೋಮವಾರ ಮಧ್ಯಾಹ್ನದೊಳಗೆ ಪ್ರತಿಕ್ರಿಯೆ ನೀಡುವಂತೆ ಎಎಪಿ ನಾಯಕಿಗೆ ಸೂಚಿಸಲಾಗಿದೆ. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಬೇಕು. ನೋಟಿಸ್‌ನಲ್ಲಿ ಪ್ರಸ್ತಾಪಿಸಲಾದ ಪ್ರತಿಯೊಂದು ಅಂಶಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಪ್ರತ್ಯೇಕವಾಗಿ ತಿಳಿಸಬೇಕು ಎಂದಿದೆ.