ಎಲೆಕ್ಷನ್ ಪ್ರಜಾಪ್ರಭುತ್ವದಲ್ಲಿ ಬರುವ ಒಂದು ಔಪಚಾರಿಕ ವ್ಯವಸ್ಥೆ. ಇಲ್ಲಿ ಜನ ತಮ್ಮ ಪ್ರತಿನಿಧಿಗಳನ್ನು ಮತ ಚಲಾಯಿಸುವ ಮೂಲಕ ಆಯ್ಕೆ ಮಾಡುತ್ತಾರೆ. ನಮ್ಮ ಭಾರತದಲ್ಲಿ ಲೋಕಸಭಾ, ವಿಧಾನಸಭಾ ಮತ್ತು ಸ್ಥಳೀಯ ಚುನಾವಣೆಗಳು 5 ವರ್ಷಕ್ಕೊಮ್ಮೆ ಬರುತ್ತದೆ.
ಜನರ ಕೈಯಲ್ಲಿ ಆ ಒಂದು ದಿನ ಆಯುಧವಿರುತ್ತದೆ. ಆ ಆಯುಧವೇ ತಮ್ಮ ಕ್ಷೇತ್ರಕ್ಕೆ ಬೇಕಾದ ಅರ್ಹ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ದಿನ. ನಮ್ಮ ಜನ ನಿಜಕ್ಕೂ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆಯೆ? ಖಂಡಿತ ಇಲ್ಲ. ಶೇಕಡಾ 30ರಷ್ಟು ಮಂದಿ ಮತದಾನವೆ ಮಾಡುವುದಿಲ್ಲ, ಇನ್ನುಳಿದವರಲ್ಲಿ ಮುಕ್ಕಾಲು ಮಂದಿ ತಮ್ಮ ಮತವನ್ನು ಮಾರಿಬಿಡುತ್ತಾರೆ.
ಸ್ವಲ್ಪ ಜನ ತಮ್ಮ ಮತದಾನದ ಮೂಲಕ ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ, ಆದರೆ ಆಗುವುದಿಲ್ಲ. ಶೀಘ್ರವೇ ನಾವು ಕರ್ನಾಟಕದಲ್ಲಿ 16ನೆ ವಿಧಾನಸಭಾ ಚುನಾವಣೆಯನ್ನು ನೋಡುತ್ತೇವೆ. ರಾಜಕಾರಣಿಗಳು ಆಗಲೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತ ಬೇಟೆಯನ್ನು ಶುರು ಮಾಡಿದ್ದಾರೆ. ಅಧಿಕಾರ ಹೊಂದಿರುವ ಪಕ್ಷಕ್ಕೆ ಅಧಿಕಾರ ಉಳಿಸಿಕೊಳ್ಳುವ ಆಸೆ. ಅಧಿಕಾರದಲ್ಲಿ ಇರದ ಪಕ್ಷಗಳಿಗೆ ಈ ಸಲ ನಮ್ಮ ಪಕ್ಷವೆ ಅಧಿಕಾರಕ್ಕೆ ಬರಬೇಕು ಎನ್ನುವ ಆಸೆ.
ಅಧಿಕಾರದ ಚುಕ್ಕಾಣಿ ಹಿಡಿಯಲು ಈ ಪಕ್ಷಗಳು ಏನು ಬೇಕಾದರೂ ಮಾಡುತ್ತಾರೆ. 2018ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರದ ಕೆಲವು ಶಾಸಕರು ಅಧಿಕಾರಕ್ಕೋಸ್ಕರ ತಮ್ಮನ್ನು ತಾವೆ ಕೋಟಿಗಳಿಗೆ ಮಾರಿಕೊಂಡುಬಿಟ್ಟರು.
ಕೋಟಿ ಕೋಟಿ ಹಣ ಕೊಟ್ಟು ಶಾಸಕರನ್ನು ಖರೀದಿಸಿದ ಪಕ್ಷ ಆ ಕೋಟಿಗಳನ್ನು ಹಿಂಪಡೆಯಲು ಏನೆಲ್ಲಾ ಮಾಡಿತು ಎಂದು ತಿಳಿದೆ ಇದೆ. ಜನರ ಕೈಯಲ್ಲಿ ಒಂದು ದಿನ ಅಧಿಕಾರವಿದ್ದರೆ ಮಿಕ್ಕೆಲ್ಲಾ ದಿನಗಳು ಆಯ್ಕೆ ಆದ ಜನಪ್ರತಿನಿಧಿಗಳ ಕೈಯಲ್ಲಿ ಇರುತ್ತದೆ. ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಕ್ಕೆ ನಿಜವಾಗಿಯೂ ಸೇವೆ ಸಲ್ಲಿಸುತ್ತಾರೆಯೆ? ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಕ್ಷೇತ್ರವನ್ನು ಒಂದು ಬಾರಿಯೂ ನೋಡದ ಅಭ್ಯರ್ಥಿಗಳು ಸಹ ತಮ್ಮ ಕ್ಷೇತ್ರವನ್ನು ಸುತ್ತಲು ಶುರು ಮಾಡುತ್ತಾರೆ.
ಎಲೆಕ್ಷನ್ ಬಂದರೆ ಸಾಕು ಹಣ ಹೊಳೆಯಂತೆ ಹರಿಯುತ್ತದೆ. ಕೋಟಿ ಕೋಟಿ ಹಣ ಅಭ್ಯರ್ಥಿಗಳ ಜೇಬಿನಿಂದ ಖರ್ಚು ಆಗುತ್ತದೆ. ಗೆದ್ದ ಅಭ್ಯರ್ಥಿ ಹಣ ಹಿಂಪಡೆಯಲು ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡರೆ ಸೋತ ಅಭ್ಯರ್ಥಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯಾವುದಾದರೂ ಸ್ಥಾನಮಾನ ಸಿಕ್ಕರೆ ಹಣ ಪಡೆಯಲು ಪ್ರಯತ್ನಿಸುತ್ತಾನೆ. ಎಲೆಕ್ಷನ್ ಹತ್ತಿರ ಬಂದರೆ ಸಾಕು ಕಿತ್ತೋದ ರಸ್ತೆಗಳಿಗೆ ಡಾಂಬರೀಕರಣ ಮಾಡುವುದು.
ಜನರ ಕಷ್ಟಗಳಿಗೆ ಬೇಗ ಸ್ಪಂದನೆ ಮಾಡುವುದು ಮತ್ತು ಜನರ ಮನೆ ಮುಂದೆ ಅವರಿಗಾಗಿ ಕಾಯುವುದು. ಯುವಕರ ಮತವನ್ನು ಸೆಳೆಯಲು ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುವುದು. ಹೆಂಗಸರ ಮತವನ್ನು ಸೆಳೆಯಲು ಕುಕ್ಕರ್, ಸೀರೆ ಮತ್ತು ಇತರೆ ಸಾಮಗ್ರಿಗಳ ಆಸೆ ತೋರಿಸುವುದು. ಪುರುಷರ ಮತ ಸೆಳೆಯಲು ಎಣ್ಣೆ ಮತ್ತು ಬಿರಿಯಾನಿ ಕೊಡಿಸುವುದು. ಎಲೆಕ್ಷನ್ ಸಮಯದಲ್ಲಿ ಕುಡುಕರು ಸದಾ ಸ್ವರ್ಗದಲ್ಲಿ ಇರುತ್ತಾರೆ.
ತಮ್ಮ ಪಕ್ಷದ ಮುಖಂಡರಿಗೆ ಭರ್ಜರಿ ಔತಣಕೂಟಗಳನ್ನು ಏರ್ಪಡಿಸುವುದು ಮತ್ತು ಅವರ ಜೇಬಿಗೆ ಹಣ ತುಂಬಿಸಿ ಕಳಿಸುವುದು. ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳು ಪ್ರಚಾರ ಮಾಡುವ ಪರಿ ನೋಡಬೇಕು. ಪ್ರತಿ ಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡುವುದು. ನಮ್ಮ ರಾಜ್ಯದಲ್ಲಿ ಎಲೆಕ್ಷನ್ ಬಹುತೇಕ ಬೇಸಿಗೆಯಲ್ಲಿ ಬರುತ್ತದೆ. ಗ್ರಾಮಗಳ ಜನರು ಕೆಲಸ ಇಲ್ಲದೆ ಇರುತ್ತಾರೆ. ಅಂತಹವರನ್ನು ಎಲೆಕ್ಷನ್ ಪ್ರಚಾರಕ್ಕೆ ದುಡ್ಡು ಕೊಟ್ಟು ಕರೆದುಕೊಂಡು ಹೋಗಿರುತ್ತಾರೆ.
ಪ್ರತಿ ತಲೆಗೆ 500, 1000 ನಿಗದಿ ಮಾಡಿ ಬಸ್ಸುಗಳ ಮೂಲಕ ಕರೆದುಕೊಂಡು ಹೋಗುವುದು. ಎಲೆಕ್ಷನ್ ಸಮಯದಲ್ಲಿ ಈ ಬಸ್ಸುಗಳು ಜನರ ಸೇವೆ ಮಾಡುವ ಬದಲು ರಾಜಕಾರಣಿಗಳ ಕಾರ್ಯಕ್ರಮಗಳ ಸೇವೆ ಮಾಡುತ್ತವೆ. ಬಸ್‌ಗಳ ಮಾಲೀಕರು ದುಡ್ಡಿನ ಆಸೆಗೆ ತಮ್ಮ ಬಸ್ಸುಗಳನ್ನು ಪ್ರಚಾರಕ್ಕೆ ಕಳಿಸುತ್ತಾರೆ. ಜನ ಬಸ್ಸುಗಳು ಇಲ್ಲದೆ ಪರದಾಡುತ್ತಾರೆ.
ಬೈಕ್ ಯಾತ್ರೆ ಮಾಡುವ ಅಭ್ಯರ್ಥಿಗಳು ಜನರ ಬೈಕ್‌ಗಳಿಗೆ ಉಚಿತವಾಗಿ ಪೆಟ್ರೋಲ್ ಹಾಕಿಸುವುದು. ನಮ್ಮ ಜನ ಹಣ ಮತ್ತು ತಮ್ಮ ಗಾಡಿಗೆ ಪೆಟ್ರೋಲ್ ಸಿಗುತ್ತದೆ ಎಂದು ಪ್ರಚಾರಕ್ಕೆ ಹೋಗುತ್ತಾರೆಯೆ ವಿನಃ ಆ ಅಭ್ಯರ್ಥಿ ನಮ್ಮ ಕ್ಷೇತ್ರ ಅಭಿವೃದ್ಧಿ ಮಾಡಬಲ್ಲನೆ ಎಂದು ನೋಡುವುದಿಲ್ಲ.
ಜನರ ಮತವನ್ನು ಖರೀದಿ ಮಾಡಬೇಕಲ್ಲ, ಅದಕ್ಕೆಲ್ಲ ಈ ಅಭ್ಯರ್ಥಿಗಳು ಏನೆಲ್ಲಾ ಮಾಡುತ್ತಾರೆ ಗೊತ್ತೆ? ಕಳೆದ ಬಾರಿ ಸೋತ ಅಭ್ಯರ್ಥಿ ಅನುಕಂಪದ ಬತ್ತಳಿಕೆಯನ್ನು ಪ್ರಯೋಗಿಸುತ್ತಾನೆ. ತಮ್ಮ ಮುಖಂಡರ ಮೂಲಕ ಜನರಿಂದ ಆಣೆ ಪ್ರಮಾಣ ಮಾಡಿಸಿಕೊಳ್ಳುತ್ತಾರೆ. ತಮ್ಮ ಜಾತಿಯ ಜನರ ಮನ ಒಲಿಸುವುದು. ಜನರ ಹತ್ತಿರ ಕೈ ಮುಗಿದು ಮತ ನೀಡಿ ಎಂದು ಭಿಕ್ಷೆ ಬೇಡುವುದು.
ಸುಳ್ಳುಗಳ ಅರಮನೆಯನ್ನು ಕಟ್ಟುವುದು ರಾಜಕರಣಿಗಳ ಪರಮ ಸಿದ್ಧ ಕೌಶಲ್ಯ. ಪೊಲೀಸರ ಕಾವಲು ಇದ್ದರೂ ರಾಜಕಾರಣಿಗಳು ತಮ್ಮ ಕ್ಷೇತ್ರಗಳಿಗೆ ಹಣ ತಲುಪಿಸಲು ಬಹಳ ಬುದ್ಧಿಯನ್ನು ಉಪಯೋಗಿಸುತ್ತಾರೆ. ತರಕಾರಿಗಳಲ್ಲಿ ದುಡ್ಡು, ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ದುಡ್ಡು, ಚಿಪ್ಸ್ ಪಾಕೆಟ್‌ಗಳಲ್ಲಿ ದುಡ್ಡು ಮತ್ತು ಇತರೆ ಮಾರ್ಗಗಳು. ಕಳ್ಳರಿಗೆ ಸಾವಿರ ದಾರಿ ಇದ್ದಂತೆ.
ಜನ ತಮ್ಮ ಮತವನ್ನು ಮಾರಿಕೊಂಡು ಎಲ್ಲಾ ಆದ ಮೇಲೆ ಈ ಸರ್ಕಾರ ಸರಿ ಇಲ್ಲ, ಈ ಶಾಸಕ ಸರಿ ಇಲ್ಲ ಎಂದು ಹೇಳಿಕೊಂಡು ಇರುತ್ತಾರೆ ಅಷ್ಟೇ. ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಿಲ್ಲ, ನಮ್ಮ ಜಾತಿಯನ್ನು ಅಭಿವೃದ್ಧಿ ಮಾಡಿಲ್ಲ, ನಮ್ಮ ಮಕ್ಕಳಿಗೆ ಏನು ಮಾಡಿಲ್ಲ ಎಂದು ಯೋಚನೆ ಮಾಡುತ್ತಾರೆ.
ಜನ ಎಲ್ಲಾ ಆದ ಮೇಲೆ ಕೊರಗುವ ಬದಲು ಮುಂಚೆಯೇ ತಮ್ಮ ಕ್ಷೇತ್ರಕ್ಕೆ ಯಾರು ಉತ್ತಮ ಎಂದು ತಿಳಿದು ಮತ ಚಲಾಯಿಸಬೇಕು. ತಮ್ಮ ಮತಗಳನ್ನು ಮಾರಿಕೊಳ್ಳದೆ ಅದನ್ನು ಆಯುಧವಾಗಿ ಪರಿವರ್ತಿಸಬೇಕು. ಮತ ಚಲಾಯಿಸದೆ ಮನೆಯಲ್ಲಿ ಉಳಿಯುವ ಜನ ತಮಗೆ ಸಿಗುವ ಒಂದು ದಿನದ ಅಧಿಕಾರವನ್ನು ಬಳಸಿ ಕೊಳ್ಳಬೇಕು. ಯುವಕರು ಮನಸ್ಸು ಮಾಡಿ ಎಲೆಕ್ಷನ್‌ನಲ್ಲಿ ನಿಂತು ಗೆದ್ದು ತಮ್ಮ ತಮ್ಮ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಬೇಕು.
ತಮ್ಮ ಜಾತಿಯವ, ತಮ್ಮ ಊರಿನವ, ತಮ್ಮ ಭಾಷೆಯವ ಎಂಬುದನ್ನು ಮರೆತು ಮತ ಚಲಾಯಿಸಿ. ನಮ್ಮ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸುವ ಅಧಿಕಾರ ನಮ್ಮ ಕೈಯಲ್ಲಿದೆ. ಎಲೆಕ್ಷನ್ ಬಂದಾಗ ಎಲ್ಲಾರೂ ಮತ ಚಲಾಯಿಸಿ.
ಕಿರಣ್ ಕುಮಾರ್ ಡಿ ದೊಗ್ಗನಹಳ್ಳಿ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ