ಮಾರ್ಚ್‌ 27ರ ವೇಳೆಗೆ ಚುನಾವಣಾ ವೇಳಾಪಟ್ಟಿ..!

ಬೆಂಗಳೂರು

    ರಾಜ್ಯ ವಿಧಾನಸಭೆಯ ಚುನಾಣಾ ವೇಳಾಪಟ್ಟಿ ಮಾರ್ಚ್ ಇಪ್ಪತ್ತೇಳರ ವೇಳೆಗೆ ಪ್ರಕಟವಾಗಲಿದ್ದು, ಅಷ್ಟರೊಳಗೆ ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚನೆ ನೀಡಿದೆ. ಕೇಂದ್ರದ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಸಚಿವರು ಮತ್ತು ಶಾಸಕರಿಗೆ ಸಂದೇಶ ರವಾನೆ ಮಾಡಿ ಬಾಕಿ ಉಳಿದಿರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು, ಜನರಿಗೆ ಅದು ತಲುಪುವಂತಾಗಬೇಕು ಎಂದು ಸಂದೇಶ ರವಾನಿಸಿದೆ.

    ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ 2023-24 ನೇ ಸಾಲಿನ ಬಜೆಟ್ ಗೆ ಅನುಮೋದನೆ ಪಡೆದು ಮಾರ್ಚ್ ಒಂದರಿಂದಲೇ ಬಜೆಟ್ ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮುಂದಾಗಿದ್ದಾರೆ. ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಪಕ್ಷದ ಶಾಸಕರಿಗೆ ಸೂಚನೆ ನೀಡಿದ್ದು,ನಿಮ್ಮ ನಿಮ್ಮ ಕ್ಷೇತ್ರದಲ್ಲೇ ಇದ್ದು ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವಂತೆ ಸೂಚಿಸಿದ್ದಾರೆ.

   ಚುನಾವಣಾ ಆಯೋಗ ವೇಳಾಪಟ್ಟಿಯಲಿ ಪ್ರಕಟಿಸುವುದಕ್ಕಿಂತ ಮುನ್ನವೇ ಕೇಂದ್ರ ಸರ್ಕಾರ ರಾಜ್ಯದಲ್ಲಿ ತಾನು ಕೈಗೊಂಡಿರುವ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಭರದ ತಯಾರಿ ನಡೆಸಿದೆ. ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರಮೋದಿಯವರು ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ನಾಲ್ಕು ಬಾರಿ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಅನುಷ್ಟಾನದ ಜತೆಗೆ ಪಕ್ಷದ ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಪಕ್ಷದ ಪರವಾಗಿ ಅಲೆ ಎಬ್ಬಿಸಲು ತೀರ್ಮಾನಿಸಿದದಾರೆ.

    ಪದೇ ಪದೇ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರಮೋದಿಯವರು ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು,ಕೇAದ್ರ ಗೃಹ ಸಚಿವ ಅಮಿತ್ ಷಾ,ಪಕ್ಷದ 

    ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸೇರಿದಂತೆ ಹಲವು ನಾಯಕರು ರಾಜ್ಯದಲ್ಲಿ ಪ್ರವಾಸ ಆರಂಭಿಸಿದ್ದಾರೆ. ಸರ್ಕಾರದ ಸೂಚನೆಯ ಮೇರೆಗೆ ಬಿಜೆಪಿಯ ಸಚಿವರು ಮತ್ತು ಶಾಸಕರು ರಾಜ್ಯ ಕೇಂದ್ರೀತ ಕಾರ್ಯಕ್ರಮಗಳಿಗಿಂತ ತಮ್ಮ ತಮ್ಮ ಕ್ಷೇತ್ರದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಮತದಾರರ ಮನ ಸೆಳೆಯುವ ಯತ್ನ ಆರಂಭಿಸಿದ್ದಾರೆ.

     ಪಕ್ಷದ ಶಾಸಕರ ಅನುಕೂಲಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ಕ್ಷೇತ್ರಾಭಿವೃದ್ಧಿ ನಿಧಿ ಸೇರಿದಂತೆ ಹಲವು ಬಾಬ್ತುಗಳಲ್ಲಿ ಶಾಸಕರಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ ಆಡಳಿತಾರೂಢ ಬಿಜೆಪಿ ಮಾತ್ರವಲ್ಲದೆ,ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡಾ ಕೇಂದ್ರ ಚುನಾವಣಾ ಆಯೋಗದ ಇಂಗಿತ ಅರ್ಥವಾಗುತ್ತಿದ್ದಂತೆಯೇ ರಾಜ್ಯ ಪ್ರವಾಸದ ಮೇಲೆ ತಮ್ಮ ಗಮನ ನೆಟ್ಟಿವೆ.

     ಆ ಮೂಲಕ ಕರ್ನಾಟಕದಲ್ಲಿ ಮೂರೂ ರಾಜಕೀಯ ಪಕ್ಷಗಳ ಚುನಾವಣಾ ತಯಾರಿ ವಿದ್ಯುಕ್ತವಾಗಿ ಆರಂಭವಾಗಿದ್ದು ಪಕ್ಷಾತೀತವಾಗಿ ಸಂಭವನೀಯ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಉಡುಗೊರೆಗಳ ಸುರಿಮಳೆಗೈಯ್ಯುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link