ನವದೆಹಲಿ
ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಬಹಳ ವೇಗದಲ್ಲಿ ಹೆಚ್ಚುತ್ತಿದೆ. ನಾಲ್ಕು ವರ್ಷಗಳ ಹಿಂದೆ ಅತಿಹೆಚ್ಚು ರಫ್ತಾದ ವಿಭಾಗದಲ್ಲಿ ಏಳನೇ ಸ್ಥಾನದಲ್ಲಿದ್ದ ಎಲೆಕ್ಟ್ರಾನಿಕ್ಸ್ ಸೆಕ್ಟರ್ ಇದೀಗ ಮೂರನೇ ಸ್ಥಾನಕ್ಕೆ ಏರಿದೆ. ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಈ ಹಣಕಾಸು ವರ್ಷದೊಳಗೆ ಎರಡನೇ ಸ್ಥಾನಕ್ಕೆ ಏರುವ ಸಾಧ್ಯತೆ ಕಾಣುತ್ತಿದೆ.
ಇದೇ ವೇಳೆ, ಐಫೋನ್ ಇತ್ಯಾದಿ ಎಲೆಕ್ಟ್ರಾನಿಕ್ಸ್ ವಸ್ತುಗಳ ರಫ್ತು ಕೂಡ ಗಣನೀಯವಾಗಿ ಹೆಚ್ಚುತ್ತಿದೆ. 2025-26ರ ಹಣಕಾಸು ವರ್ಷ ಮುಗಿಯುವ ವೇಳೆಗೆ ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಪೆಟ್ರೋಲಿಯಂ ಅನ್ನೂ ಮೀರಿಸುವ ಅಂದಾಜಿದೆ. ಎಂಜಿನಿಯರಿಂಗ್ ಉತ್ಪನ್ನಗಳ ರಫ್ತು ಈ ವರ್ಷ (2025-26) ಶೇ. 5.35ರಷ್ಟು ಹೆಚ್ಚಳಗೊಂಡು 59.3 ಬಿಲಿಯನ್ ಡಾಲರ್ ಮೊತ್ತ ಮುಟ್ಟಿದೆ. ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಶೇ. 16.4ರಷ್ಟು ಕಡಿಮೆಗೊಂಡಿವೆ. ಇನ್ನು ಎಲೆಕ್ಟ್ರಾನಿಕ್ಸ್ ರಫ್ತು ಮೂರು ವರ್ಷಗಳ ಹಿಂದೆ (2022-23) 23.5 ಬಿಲಿಯನ್ ಡಾಲರ್ ಇದ್ದದ್ದು 2024-25ರಲ್ಲಿ 38.5 ಬಿಲಿಯನ್ ಡಾಲರ್ಗೆ ಏರಿದೆ. ಈ ಹಣಕಾಸು ವರ್ಷದಲ್ಲಿ ಇದು 2023ರದಕ್ಕಿಂತ ಎರಡು ಪಟ್ಟು ಹೆಚ್ಚುವ ನಿರೀಕ್ಷೆ ಇದೆ. ಇದು ಆದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಮೀರಿಸಿ ಎರಡನೇ ಸ್ಥಾನ ಅಲಂಕರಿಸಲಿದೆ ಎಲೆಕ್ಟ್ರಾನಿಕ್ಸ್ ರಫ್ತು.








