ಆನೇಕಲ್:
ಆಹಾರ ಅರಸಿ ಕಾಡಿನಿಂದ ಬಂದ ಕಾಡಾನೆಗಳ ಹಿಂಡು ಆನೇಕಲ್ ತಾಲ್ಲೂಕಿನ ಸೋಲೂರು, ಮೆಣಸಿನಹಳ್ಳಿ, ತೆಲಗರಹಳ್ಳಿ ಗ್ರಾಮಗಳಲ್ಲಿನ ರೈತರ ಬೆಳೆಗಳನ್ನು ತಿಂದು ಹಾಕಿವೆ.
ಸೋಮವಾರ ರಾತ್ರಿ ಕಾಡಿನಿಂದ ಬಂದ ಸುಮಾರು ಮೂರು ಮರಿಗಳು ಸೇರಿದಂತೆ 34 ಆನೆಗಳ ಬೃಹತ್ ಹಿಂಡು ಬೆಳಗಾದರೂ ಕಾಡಿನತ್ತ ತೆರಳದೇ ನೀಲಗಿರಿ ತೋಪುಗಳಲ್ಲೇ ಉಳಿದಿದ್ದವು.
ಕಾಡಾನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಮಾಡಿ ರಾತ್ರಿ 7.30ರ ವೇಳೆಗೆ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಮೆಣಸಿಗನಹಳ್ಳಿಯ ನೀಲಗಿರಿ ತೋಪಿನಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿರುವ ಮಾಹಿತಿಯನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿಗಳನ್ನು ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ಮಾಡಿದರು.
ಆನೆಗಳು ಬಂದಿರುವ ಸುದ್ದಿ ತಿಳಿದು ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಮೆಣಸಿಗನಹಳ್ಳಿ ಬಳಿ ಜಮಾಯಿಸಿದ್ದರಿಂದ ಆನೆಗಳು ಅತ್ತಿಂದಿತ್ತ ಓಡಾಟ ನಡೆಸಿದವು.
ಮೆಣಸಿಗನ ಹಳ್ಳಿಯಿಂದ ಸೋಲೂರಿನತ್ತ ಬಂದ ಆನೆಗಳು ಕೃಷ್ಣಪ್ಪ ಅವರ ಚಪ್ಪರ ಬದನೆಕಾಯಿ ತೋಟದಲ್ಲಿ ನುಗ್ಗಿ ಬೆಳೆಯನ್ನು ತುಳಿದು ಹಾಕಿದ್ದರಿಂದ ಬೆಳೆ ಹಾಳಾಗಿದೆ.
ಆನೆಗಳ ಹಿಂಡು ಥಳೀ ರಸ್ತೆಯನ್ನು ದಾಟಿ ಮುತ್ಯಾಲಮಡುವು ಉಪ್ಪುಹಾಕು ಬಂಡೆಯನ್ನು ದಾಟಿ ತಮಿಳುನಾಡಿನ ಗುಮ್ಮಳಾಪುರ ಕಾಡಿನತ್ತ ರಾತ್ರಿ 7.30ರ ವೇಳೆಗೆ ಓಡಿಸಲಾಯಿತು.
ಸೋಲೂರಿನ ಕೃಷ್ಣಪ್ಪ ಅವರ ಚಪ್ಪರ ಬದನೆಕಾಯಿ ತೋಟ, ಸೋಲೂರಿನ ಪುಟ್ಟಮ್ಮ ಅವರಿಗೆ ಸೇರಿದ ಸುಮಾರು ಒಂದು ಎಕರೆ ಟೊಮೊಟೊ ತೋಟವನ್ನು ತುಳಿದು ಹಾಳು ಮಾಡಿದೆ.
‘ಟೊಮೊಟೊಗೆ ಒಳ್ಳೆ ಬೆಲೆಯಿದ್ದು ಫಸಲು ಕೈಗೆ ಬಂದು ಲಾಭಗಳಿಸುವ ನಿರೀಕ್ಷೆಯಲ್ಲಿದ್ದೆವು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರು ಅಲವತ್ತಕೊಂಡರು.
ಸೋಲೂರಿನ ಮುನಿರಾಜು ಅವರಿಗೆ ಸೇರಿದ ರಾಗಿ ಮೆದೆಯನ್ನು ತಿಂದು ಹಾಕಿದೆ. ವಣಕನಹಳ್ಳಿಯ ಪ್ರಕಾಶ್ ಅವರಿಗೆ ಸೇರಿದ ರಾಗಿ ಮೆದೆಯನ್ನು ತಿಂದು ಹಾಕಿವೆ. ಮೆಣಸಿಗನಹಳ್ಳಿಯ ಭೈರಪ್ಪ, ಅಣ್ಣಪ್ಪ ಅವರ ರಾಗಿ ಮೆದೆ ಹಾನಿಯಾಗಿದೆ.
ವರ್ಷವಿಡೀ ಕಷ್ಟಪಟ್ಟು ಬೆಳೆದಿದ್ದ ಬೆಳೆ ಫಸಲು ಬಂದಾಗ ಆನೆಗಳ ಪಾಲಾಗಿದೆ’ ಎಂದು ರೈತರು ಪ್ರಜಾವಾಣಿಗೆ ತಿಳಿಸಿದರು.
ಆನೆಗಳನ್ನು ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದರೆ ಜನರು ಮೊಬೈಲ್‌ನಲ್ಲಿ ಆನೆಗಳನ್ನು ವಿಡಿಯೊ ಮತ್ತು ಚಿತ್ರ ತೆಗೆಯಲು ಮುಂದಾಗುತ್ತಿದ್ದರು. ಚಿತ್ರ ತೆಗೆಯಲು ಸಮೀಪಕ್ಕೆ ಜನರು ನುಗ್ಗುತ್ತಿದ್ದರು.
ಈ ಸಂದರ್ಭದಲ್ಲಿ ಆನೆಗಳು ಜನರ ಮೇಲೆ ನುಗ್ಗಿ ಬಂದವು. ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಜನರನ್ನೇ ನಿಭಾಯಿಸುವುದೇ ಸವಾಲಾಗಿತ್ತು. ಅರಣ್ಯ ಇಲಾಖೆಯು ಪಟಾಕಿಗಳನ್ನು ಸಿಡಿಸಿ ಆನೆಗಳನ್ನು ಓಡಿಸಿದರು.
ವಲಯ ಅರಣ್ಯಾಧಿಕಾರಿ ರಂಜಿತಾ, ಉಪ ವಲಯ ಅರಣ್ಯಾಧಿಕಾರಿಗಳಾದ ಬಾಲಕೃಷ್ಣ, ಬಿರಾದರ್, ಲಕ್ಷ್ಮೀಕಾಂತ್, ಸಿಬ್ಬಂದಿಗಳಾದ ನಾಗರಾಜು, ಮಾರಪ್ಪ, ಚಿನ್ನಸ್ವಾಮಿ, ರಮೇಶ್ ಇದ್ದರು.
ನವೆಂಬರ್ 30ರಂದು ಆನೆಗಳು ಹಿಂಡು ತೆಲಗರಹಳ್ಳಿ, ಸೋಲೂರು ಗ್ರಾಮಗಳ ರೈತರ ಬೆಳೆಗಳನ್ನು ಹಾಳು ಮಾಡಿದ್ದವು.
ಸೋಮವಾರ ರಾತ್ರಿಯು 34 ಆನೆಗಳ ಹಿಂಡು ಇದೇ ಗ್ರಾಮಗಳತ್ತ ನುಗ್ಗಿ ಬೆಳೆಗಳನ್ನು ಹಾಳು ಮಾಡಿವೆ. ರಾಗಿ ಮತ್ತು ಬೆಳೆಗಳ ರುಚಿ ಕಂಡ ಆನೆಗಳು ಪದೇ ಪದೇ ಗ್ರಾಮಗಳತ್ತ ನುಗ್ಗುತ್ತಿರುವುದು ರೈತರಲ್ಲಿ ಆತಂಕ ತಂದಿದೆ.
ವರ್ಷವಿಡೀ ಕಷ್ಟಪಟ್ಟು ಬೆಳೆ ಬೆಳೆದು ಫಸಲು ಕೈಗೆ ಬಂದಾಗ ಆನೆಗಳು ದಾಳಿ ಮಾಡುತ್ತಿರುವುದರಿಂದ ರೈತರು ಕಂಗೆಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ