ವಯನಾಡ್ : ಸಂತ್ರಸ್ತರ ಖಾತೆಯಿಂದ ಇಎಂಐ ಕಡಿತ: ಮರುಪಾವತಿಗೆ ಜಿಲ್ಲಾಧಿಕಾರಿ ಆದೇಶ

ಕಲ್ಪೆಟ್ಟ: 

   ವಯನಾಡ್ ಭೂಕುಸಿತದ ಸಂತ್ರಸ್ತರ ಖಾತೆಯಿಂದ EMI ಕಡಿತಗೊಂಡಿರುವುದರ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ, ಸಂತ್ರಸ್ತರ ಖಾತೆಗೆ ಹಣ ಮರುಪಾವತಿ ಮಾಡುವಂತೆ ಜಿಲ್ಲಾಧಿಕಾರಿಗಳು ಬ್ಯಾಂಕ್ ಗಳಿಗೆ ಸೂಚನೆ ನೀಡಿದ್ದಾರೆ.

   ಭೂಕುಸಿತದ ಅನಾಹುತ ಸಂಭವಿಸಿದ ಬಳಿಕ ಪರಿಹಾರ ಶಿಬಿರಗಳಲ್ಲಿ ಇರುವ ಪ್ರತಿ ಕುಟುಂಬಕ್ಕೆ 10,000 ರೂಪಾಯಿಗಳ ಪರಿಹಾರ ಘೋಷಿಸಲಾಗಿತ್ತು. ಆದರೆ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆದ ಬೆನ್ನಲ್ಲೇ ಬ್ಯಾಂಕ್ ಗಳು EMI ಕಡಿತಗೊಳಿಸಿವೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು.

   ಕೇರಳ ರಾಜ್ಯ ಸಹಕಾರಿ ಬ್ಯಾಂಕ್‌ (ಕೇರಳ ಬ್ಯಾಂಕ್) ಚೂರಲ್‌ಮಲಾ ಶಾಖೆಯು ಮುಂಡಕ್ಕೈ, ಪುಂಚಿರಿಮಟ್ಟಂ ಮತ್ತು ಚೂರಲ್‌ಮಲಾ ವಿಪತ್ತು ಪೀಡಿತ ಪ್ರದೇಶಗಳಿಂದ 213 ಸಾಲಗಾರರನ್ನು ಹೊಂದಿದ್ದು, ಅವರಿಗೆ 6.63 ಕೋಟಿ ರೂಪಾಯಿಗಳ ಸಾಲವನ್ನು ವಿತರಿಸಿದೆ. ಅಲ್ಲದೆ, ಗ್ರಾಮಸ್ಥರ ಹೆಸರಿನಲ್ಲಿ 400ಕ್ಕೂ ಹೆಚ್ಚು ಚಿನ್ನದ ಸಾಲಗಳಿವೆ. ಚೂರಲ್ಮಲಾ ಶಾಖೆಯ ಅನೇಕ ಸಾಲಗಾರರ ಮೃತದೇಹಗಳು ಪತ್ತೆಯಾಗಿದ್ದು, ನಾಪತ್ತೆಯಾದವರಲ್ಲಿ ಸುಮಾರು 20 ಜನರು ಸೇರಿದ್ದಾರೆ.

   ಭೂಕುಸಿತದಲ್ಲಿ ಮೃತಪಟ್ಟವರ ಮತ್ತು ಮನೆ, ಭೂಮಿ ಕಳೆದುಕೊಂಡವರ ಸಾಲ ಮನ್ನಾ ಮಾಡಲು ಕೇರಳ ಬ್ಯಾಂಕ್ ನಿರ್ದೇಶಕ ಮಂಡಳಿ ನಿರ್ಧರಿಸಿತ್ತು. ಅಂತೆಯೇ, ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯು ವಯನಾಡ್ ದುರಂತ ಸಂತ್ರಸ್ತರು ಬ್ಯಾಂಕ್ ಸಾಲವನ್ನು ಮರುಪಾವತಿಸಬೇಕಾಗಿಲ್ಲ ಎಂದು ಸರ್ಕಾರಕ್ಕೆ ಭರವಸೆ ನೀಡಿತ್ತು. 

   “ಎರಡು ವರ್ಷಗಳ ಹಿಂದೆ ನಾನು ಹಸುಗಳನ್ನು ಖರೀದಿಸಲು ಕೇರಳ ಬ್ಯಾಂಕ್‌ನಿಂದ ಸಾಲ ಪಡೆದಿದ್ದೆ. ಭೂಕುಸಿತದಲ್ಲಿ ನನ್ನ ಮನೆ, ಹಸುಗಳು ಕೊಚ್ಚಿ ಹೋಗಿವೆ. ಸರಕಾರದಿಂದ ಬಂದ ತಕ್ಷಣದ ಪರಿಹಾರ ನಿಧಿ ನನ್ನ ಖಾತೆಗೆ ಜಮಾ ಆದ ನಂತರ ಬ್ಯಾಂಕ್‌ನಿಂದ ಆಗಸ್ಟ್ 15ರಂದು 5 ಸಾವಿರ ರೂ. ಇಎಂಐ ಕಡಿತಗೊಂಡಿದೆ ಎಂದು ಮುಂಡಕ್ಕೈ ನಿವಾಸಿ ರಾಜೇಶ್ ಹೇಳಿದ್ದಾರೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಧ್ಯಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಕಡಿತಗೊಳಿಸಿದ ಮೊತ್ತವನ್ನು ಮರುಪಾವತಿ ಮಾಡಲಾಗುವುದು ಎಂದು ಕೇರಳ ಬ್ಯಾಂಕ್ ಅಧ್ಯಕ್ಷ ವಿ ರವೀಂದ್ರನ್ ಹೇಳಿದ್ದಾರೆ.

Recent Articles

spot_img

Related Stories

Share via
Copy link
Powered by Social Snap