ಉಡುಪಿ
ಉಡುಪಿ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಈ ಮಾಹಿತಿ ತಿಳಿಯುವುದು ಉತ್ತಮ. ಕಾರ್ಕಳದ ಪರಶುರಾಮ ಥೀಂ ಪಾರ್ಕ್ಗೆ ಪ್ರವಾಸಿಗರ ಭೇಟಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಜೂನ್ 26ರಿಂದಲೇ ಈ ಆದೇಶ ಜಾರಿಗೆ ಬರಲಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪರಶುರಾಮ ಥೀಂ ಪಾರ್ಕ್ ಇದೆ. ಕೆಲವು ತಿಂಗಳ ಹಿಂದೆ ಉದ್ಘಾಟನೆಗೊಂಡ ಇದು ಉಡುಪಿಯ ಪ್ರಮುಖ ಪ್ರವಾಸಿ ತಾಣವಾಗಿದೆ. ಆದರೆ ಪ್ರವಾಸಿಗರ ಭೇಟಿಯನ್ನು ಪಾರ್ಕ್ಗೆ ಜೂನ್ 26 ರಿಂದ ಸೆಪ್ಟೆಂಬರ್ ಅಂತ್ಯದ ತನಕ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಪರಶುರಾಮ ಥೀಂ ಪಾರ್ಕ್ನಲ್ಲಿ ಪರಶುರಾಮ ಮೂರ್ತಿಯನ್ನು ಬಲಪಡಿಸುವ, ಮೂರ್ತಿಗೆ ಸಿಡಿಲು ನಿರೋಧಕವನ್ನು ಅಳವಡಿಸುವ, ಮೂರ್ತಿಗೆ ತುಕ್ಕು ನಿರೋಧಕ ಲೇಪನ ಹಾಗೂ ಇನ್ನಿತರ ಮುಕ್ತಾಯದ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ಈ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಭೇಟಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಕಾಮಗಾರಿಗಳಿಗೆ ಅನುಕೂಲವಾಗುವಂತೆ ಜೂನ್ 26ರಿಂದ ಸೆಪ್ಟಂಬರ್ ಅಂತ್ಯದವರೆಗೆ ಪರಶುರಾಮ ಥೀಂ ಪಾರ್ಕ್ಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರ್ ಕಚೇರಿಯ ಪ್ರಕಟಣೆ ತಿಳಿಸಿದೆ.
ಕಾರ್ಕಳದ ಪರಶುರಾಮ ಥೀಂ ಪಾರ್ಕ್ನಲ್ಲಿ 33 ಅಡಿ ಎತ್ತರದ ಪರಶುರಾಮನ ವಿಗ್ರಹವಿದೆ. 15 ಟನ್ ಭಾರದ ವಿಗ್ರಹವನ್ನು ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕೃಷ್ಣ ನಾಯ್ಕ್ ಕೆತ್ತನೆ ಮಾಡಿದ್ದಾರೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಪ್ರತಿಮೆ, ಥೀಂ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಅಂದು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಪಾರ್ಕ್ ಉದ್ಘಾಟಿಸಿದ್ದರು.
ಪರಶುರಾಮ ಥೀಂ ಪಾರ್ಕ್ನಲ್ಲಿ ಕೆಲವು ಕೆಲಸಗಳು ಬಾಕಿ ಇದೆ. ಪಾರ್ಕ್ ಉದ್ಘಾಟನೆಗೊಂಡ ಬಳಿಕ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲದೇ ವಾರಾಂತ್ಯ, ಸರ್ಕಾರಿ ರಜೆ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಈಗ ಕಾಮಗಾರಿಯ ಹಿನ್ನಲೆಯಲ್ಲಿ ಪ್ರವಾಸಿಗರ ಭೇಟಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕಾರ್ಕಳದ ಉಮಿ ಕುಂಜ ಬೆಟ್ಟದ ಮೇಲೆ ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಪರಶುರಾಮ ಪ್ರತಿಮೆ, ಬಯಲು ರಂಗಮಂದಿರ, ಆರ್ಟ್ ಗ್ಯಾಲರಿ, ಭಜನಾ ಮಂದಿರ ಮುಂತಾದವುಗಳು ಪಾರ್ಕ್ನ ಪ್ರಮುಖ ಆಕರ್ಷಣೆಯಾಗಿದೆ.
ಈ ಪ್ರದೇಶ ಬೆಟ್ಟ-ಗುಡ್ಡಗಳಿಂದ ಸುತ್ತುವರೆದಿದೆ. ಆದ್ದರಿಂದ ಮಳೆಗಾಲದಲ್ಲಿ ಗುಡುಗು, ಮಿಂಚಿನ ಸಮಸ್ಯೆ ಎದುರಾಗಬಾರದು ಎಂದು ಮೂರ್ತಿಗೆ ಸಿಡಿಲು ನಿರೋಧಕವನ್ನು ಅಳವಡಿಸುವ, ಮೂರ್ತಿಗೆ ತುಕ್ಕು ನಿರೋಧಕ ಲೇಪನ ಅಳವಡಿಕೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಉಡುಪಿ ಜಿಲ್ಲಾ ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಪ್ರತಿಮೆಯ ಜೊತೆಗೆ ಆಡಿಯೋ ವಿಶ್ಯುವಲ್ ಕೊಠಡಿ, ಸುಸಜ್ಜಿತ ವಸ್ತು ಸಂಗ್ರಹಾಲಯ, ಗ್ಯಾಲರಿ, ಬಯಲು ರಂಗ ಮಂದಿರ ಇಲ್ಲಿದೆ.
ಉಡುಪಿಯ ವಿನ್ಯಾಸಗಾರ ಎ. ಆರ್. ಸಂಪ್ರೀತ್ 100 ಅಡಿ ಎತ್ತರದ ಬಂಡೆ ಕಲ್ಲು ಹಾಗೆಯೇ ಉಳಿಸಿಕೊಂಡು ಈ ಥೀಮ್ ಪಾರ್ಕ್ ವಿನ್ಯಾಸಗೊಳಿಸಿದ್ದಾರೆ. ಪಾರ್ಕ್ ಸುತ್ತಲಿನ ಸುಂದರ ಪ್ರಾಕೃತಿಕ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತದೆ. ಉಡುಪಿ ನಿರ್ಮಿತಿ ಕೇಂದ್ರ ಈ ಪಾರ್ಕ್ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದು, ಅಚ್ಚುಕಟ್ಟಾಗಿ ಕಾಮಗಾರಿ ಪೂರ್ಣಗೊಳಿಸಿದೆ. ಈಗ ನೈಋತ್ಯ ಮುಂಗಾರು ಮಳೆ ಆರಂಭವಾಗುವುದರಿಂದ ಪ್ರವಾಸಿಗರ ಸಂಖ್ಯೆಯೂ ಕಡಿಮೆ ಆಗುತ್ತದೆ. ಆದ್ದರಿಂದಲೇ ಈಗಲೇ ಕಾಮಗಾರಿಯನ್ನು ಪೂರ್ಣಗೊಳಿಸಲು ಜೂನ್ 26ರಿಂದಲೇ ಕಾಮಗಾರಿ ಆರಂಭಿಸಲಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ