ಕುಣಿಗಲ್:

ಶಾಸಕರ ಒಡೆತನಕ್ಕೆ ಸೇರಿದ ಕಲ್ಲು ಗಣಿಗಾರಿಕೆ ಹಾಗೂ ಇತರೆ ಗಣಿಗಾರಿಕೆಗಳಿಂದ ರೈತಾಪಿ ಜನರಿಗೆ ಮತ್ತು ಪರಿಸರದ ಮೇಲಾಗುತ್ತಿರುವ ಅನಾಹುತವನ್ನು ತಪ್ಪಿಸಲು ತಾಲ್ಲೂಕಿನ ಎಲ್ಲಾ ಗಣಿಗಾರಿಕೆಗಳನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ರೈತ ಸಂಘಟನೆ,
ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರುಗಳು ರಾಜ್ಯ ಹೆದ್ದಾರಿ ಬಂದ್ ಮಾಡಿ ಬೀಸೆಗೌಡನದೊಡ್ಡಿ ಗ್ರಾಮದ ಬಳಿ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್‍ಪಟೇಲ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಆನಂದ್‍ಪಟೇಲ್ ಮಾತನಾಡಿ, ನಿಡಸಾಲೆ ಗ್ರಾಪಂ ವ್ಯಾಪ್ತಿಯ ರಾಜಪ್ಪನದೊಡ್ಡಿ, ಬಿಸಿಗೌಡನದೊಡ್ಡಿ, ನಿಡಸಾಲೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಶಾಸಕ ರಂಗನಾಥ್ ಮಾಲೀಕತ್ವದ ರಂಗನಾಥ ಕ್ರಷರ್ ಹಾಗೂ ಕೃಷ್ಣ ಕ್ರಷರ್ ಎಂಬ ಗಣಿಗಾರಿಕೆ ಸಂಸ್ಥೆಗಳು ಕಳೆದ 4 ವರ್ಷಗಳಿಂದ ಆರಂಭಗೊಂಡು ಈ ಭಾಗದ ರೈತರ, ಸಾರ್ವಜನಿಕರ ಆರೋಗ್ಯ ಹಾಗೂ ಸಾಕು ಪ್ರಾಣಿಗಳು, ರೈತರು ಬೆಳೆಯುವ ರೇಷ್ಮೆ, ತೆಂಗು, ಅಡಕೆ ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತಿವೆ.
ಅಲ್ಲದೆ ಗ್ರಾಮೀಣ ಪ್ರಾಕೃತಿಕ ಸಂಪತ್ತು ಹಾಳಾಗಿದ್ದು, ಕೆರೆ-ಕಟ್ಟೆಗಳು ಉಪಯೋಗಕ್ಕೆ ಬಾರದಂತಾಗಿವೆ. ಇಲ್ಲಿನ ಮೊರಾರ್ಜಿ ಶಾಲೆ ಸೇರಿದಂತೆ ಅನೇಕ ಸರ್ಕಾರಿ ಕಟ್ಟಡಗಳು, ರಸ್ತೆಗಳು ಹಾಳಾಗುತ್ತಿದ್ದು, ಗಣಿ ಧೂಳಿನಿಂದ ಪರಿಸರ ಸಂಪೂರ್ಣ ನಾಶವಾಗಿ ಜನರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ದೂರಿದರು.
ಅಧಿಕಾರಿಗಳು ಬರುವಂತೆ ಪಟ್ಟು :
ಪ್ರತಿಭಟನಾ ನಿರತರರು ತಾಲ್ಲೂಕು ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದರು. ರೈತ ಸಂಘಟನೆ ಮತ್ತು ರೈತರಿಗೆ ಬೆಂಬಲವಾಗಿ ಜೆಡಿಎಸ್ ಪಕ್ಷದ ಜಗದೀಶ್ ಡಿ ನಾಗರಾಜಯ್ಯ ಮತ್ತು ಕೆಆರ್‍ಎಸ್ ಪಕ್ಷದ ಜಾಣಗೆರೆ ರಘು ಮತ್ತು ಮಾನವ ಹಕ್ಕು ಆಯೋಗದ ಸತೀಶ್ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದರಿಂದ ಬೃಹತ್ ಪ್ರತಿಭಟನೆಯೇ ನಡೆಯಿತು.
ತಹಸೀಲ್ದಾರ್‍ಗೆ ತರಾಟೆ : ಪ್ರತಿಭಟನೆಗೆ ಮಣಿದ ತಹಸೀಲ್ದಾರ್ ಮಹಾಬಲೇಶ್ವರ್ ಅರಣ್ಯ ಇಲಾಖೆಯ ಅಧಿಕಾರಿ ಮಹೇಶ್ ಆಗೂ ಪಿಡಬ್ಲೂಡಿ ಎಂಜಿನಿಯರ್ ಗುರುಸಿದ್ದಪ್ಪ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪರಿಸರ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದಾಗ ರೈತ ಮುಖಂಡರು ಅವರನ್ನು ತರಾಟೆಗೆ ತೆಗೆದುಕೊಂಡರು. ಕಳೆದ 15 ದಿನಗಳಿಂದ ರೈತ ಮಹಿಳೆಯರು ಅಹೊರಾತ್ರಿ ಧರಣಿ ನಡೆಸುತ್ತಿದ್ದರೂ ತಾಲ್ಲೂಕಿನ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ.
ಹೋರಾಟಕ್ಕೆ ಮುಂದಾಗುವ ರೈತರ ಮೇಲೆ ರೇಪ್ ಕೇಸ್ ದಾಖಲಿಸಿದ್ದಾರೆ. ಹಿಂದಿನಿಂದಲೂ ಕುಲ ಕಸುಬಾಗಿ ಕಲ್ಲು ಒಡೆದು ಬದುಕು ಸಾಗಿಸುತ್ತಿರುವ ಕೆಲವರ ಮೇಲೆ ಕೇಸು ದಾಖಲಿಸಿ ದಂಡ ವಿಧಿಸುವ ನೀವು ದೊಡ್ಡಮಟ್ಟದಲ್ಲಿ ಗಣಿಗಾರಿಕೆ ನಡೆಸಿ ಪ್ರಕೃತಿ ಸಂಪತ್ತು ನಾಶಕ್ಕೆ ಹಾಗೂ ಸಾರ್ವಜನಿಕರ ಸಮಸ್ಯೆಗೆ ಕಾರಣವಾಗಿರುವ ಗಣಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದಕ್ಕೆ ಕಾರಣವಾದರು ಏನು ಎಂದು ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಗಣಿಗಾರಿಕೆ ಸ್ಥಗಿತದ ಭರವಸೆ :
ರೈತರ ಹೋರಾಟಕ್ಕೆ ಮಣಿದ ಅಧಿಕಾರಿಗಳು ಸದ್ಯಕ್ಕೆ ಗಣಿಗಾರಿಕೆ ಸ್ಥಗಿತಗೊಳಿಸುವುದಾಗಿ ಹಾಗೂ ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು. ಮೇಲ್ನೊಟಕ್ಕೆ ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸಿರುವುದು ಕಂಡುಬಂದಿದ್ದು, ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಪರಿಸರ ಇಲಾಖೆಯ ಅಧಿಕಾರಿ ತಿಳಿಸಿದ ಬಳಿಕ ಪ್ರತಿಭಟನಾಕಾರರು ಧರಣಿ ಕೈ ಬಿಟ್ಟರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಜಗದೀಶ್ ನಾಗರಾಜಯ್ಯ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ, ರಘು ಜಾಣಗೆರೆ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಅನಿಲ್, ಕಾರ್ಯದರ್ಶಿ ವೆಂಕಟೇಶ್, ಸೇರಿದಂತೆ ಗಣಿಗಾರಿಕೆಯಿಂದ ಹಾನಿಗೊಳಗಾದ ಗ್ರಾಮಸ್ಥರು, ವಿವಿಧ ಸಂಘಟನೆಗಳ ಮುಖಂಡರುಗಳು ಭಾಗವಹಿಸಿದ್ದರು.
ಶಾಸಕ ರಂಗನಾಥ್ ಕುಣಿಗಲ್ ತಾಲ್ಲೂಕನ್ನು ಕನಕಪುರ ಮಾಡಲು ಹೊರಟಿದ್ದಾರೆ. ಕ್ರಷರ್ ನಡೆಯುವ ಸ್ಥಳದಲ್ಲಿ ಸರ್ಕಾರದ ಪವರ್ ಸ್ಟೇಷನ್ ಹಾಳಾಗಿದೆ. ಗಣಿಗಾರಿಕೆ ಸ್ಫೋಟದಿಂದ ಇಲ್ಲಿನ ಮನೆಗಳು ಬಿರುಕು ಬಿಡುತ್ತಿವೆ. ರೈತರ ಬೋರ್‍ವೆಲ್‍ಗಳು ನೀರಿಲ್ಲದೆ ಒಣಗುತ್ತಿವೆ. ಗ್ರಾಮಗಳಲ್ಲಿ ಜನರು ನೆಮ್ಮದಿಯಿಂದ ಬದುಕದಂತಾಗಿದೆ. ಇದಕ್ಕೆ ಮೂಲ ಕಾರಣ ಗಣಿಗಾರಿಕೆ ಆಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ಸ್ವತ್ತಾಗಿದ್ದಾರೆ.
– ಆನಂದ್‍ಪಟೇಲ್, ಜಿಲ್ಲಾಧ್ಯಕ್ಷರು, ರೈತ ಸಂಘ
ವೈದ್ಯ ಶಾಸಕರಿಗೆ ಜನರ ಆರೋಗ್ಯ ಬೇಕಿಲ್ಲ : ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಗದೀಶ್ ಮಾತನಾಡಿ, ವೈದ್ಯರು ಎಂದು ಹೇಳಿಕೊಳ್ಳುವ ಶಾಸಕರಿಗೆ ಗಣಿಗಾರಿಕೆಯಿಂದ ಆಗುತ್ತಿರುವ ಪರಿಸರ ನಷ್ಟ, ಆರೋಗ್ಯ ಸಮಸ್ಯೆಗಳು ಗೋಚರಿಸುತ್ತಿಲ್ಲವೆಂದು ವ್ಯಂಗ್ಯವಾಡಿದರು. ಅಮಾಯಕ ಜನರಿಗೆ ನ್ಯಾಯ ಸಿಗದೇ ಇದ್ದಾಗ ಬೆಂಬಲವಾಗಿ ನಿಂತು ಕೊಂಡಿದ್ದೇವೆ.
ಹಲವು ಬಾರಿ ಗ್ರಾಮಸ್ಥರು ಇಲ್ಲಿ ನಡೆಯುವ ದುರ್ಘಟನೆಗಳ ಬಗ್ಗೆ ಗಣಿಗಾರಿಕೆ ವಿರುದ್ಧ ಪೆÇಲೀಸರಿಗೆ ದೂರು ಕೊಡಲು ಹೋದರೆ ಗ್ರಾಮಸ್ಥರನ್ನು ಹೆದರಿಸಿದ್ದಾರೆ. ಪೆÇಲೀಸ್ ವ್ಯವಸ್ಥೆ ಶಾಸಕರ ಕಪಿಮುಷ್ಟಿಯಲ್ಲಿ ಇರುವುದು ದುರದೃಷ್ಟಕರ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








