ಬೆಂಗಳೂರು
ಕಳೆದ 15 ದಿನಗಳ ಅಂತರದಲ್ಲಿ ಮಾನವ-ವನ್ಯಜೀವಿ ಸಂಘರ್ಷದಲ್ಲಿ 11 ಜನರು ಸಾವಿಗೀಡಾಗಿದ್ದು, ಅಮೂಲ್ಯ ಜೀವ ಹಾನಿ ತಪ್ಪಿಸಲು ಅಗತ್ಯ ಮತ್ತು ತುರ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಆನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಗಳಿಗೆ 500 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅರಣ್ಯ ಘಟಕದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಮತ್ತು ವನ್ಯ ಜೀವಿ ಸಂಘರ್ಷ ಇಂದು ನಿನ್ನೆಯದೇನಲ್ಲ. ಹಿಂದಿನಿAದ ನಡೆಯುತ್ತಿದೆ. ಆದರೆ, ಅರಣ್ಯ ಪ್ರದೇಶ ಕಡಿಮೆ ಆಗುತ್ತಿದ್ದು, ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಂಘರ್ಷಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.
ಈ ಬಾರಿ ವಾಡಿಕೆಗಿಂತ ಬಹಳ ಕಡಿಮೆ ಮಳೆ ಆಗಿದ್ದು, ಕಾಡಿನಲ್ಲಿ ಕುಡಿಯುವ ನೀರು ಮತ್ತು ಆಹಾರದ ಸಮಸ್ಯೆಯಿಂದಾಗಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯದೊಳಗೆ ವನ್ಯಜೀವಿಗಳಿಗೆ ಸೂಕ್ತ ಆಹಾರ ದೊರಕುವಂತೆ ಮಾಡುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.
ಆನೆ ಕಾರಿಡಾರ್ ರಕ್ಷಣೆ: ಆನೆ ಕಾರಿಡಾರ್ ಗಳಲ್ಲಿ ರಸ್ತೆ, ರೈಲು, ವಿದ್ಯುತ್ ಕಂಬ, ನೀರಿನ ಕೊಳವೆ ಅಳವಡಿಕೆಗಾಗಿ ಕೆಲವು ಭಾಗ ಬಳಕೆಯಾಗಿದೆ. ಆದರೆ, ಖಾಸಗಿಯವರಿಂದ ಒತ್ತುವರಿ ಆಗಿದ್ದರೆ ಇದನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಿ, ಆನೆ ಕಾರಿಡಾರ್ ರಕ್ಷಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಕಾಡಿನಂಚಿನಲ್ಲಿ ನಡೆಯುವ ಕಲ್ಲು ಗಣಿಗಾರಿಕೆಯ ಶಬ್ದದಿಂದ ವನ್ಯಮೃಗಗಳು ನಾಡಿಗೆ ಬರುತ್ತಿವೆ ಇದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರಣ್ಯದೊಳಗೆ ಅಥವಾ ಅರಣ್ಯದ ಅಂಚಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ಅವಕಾಶ ಇರುವುದಿಲ್ಲ. ಅಂತಹ ಗಣಿಗಾರಿಕೆ ನಡೆಯುತ್ತಿರುವುದು ಕಂಡುಬAದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಅರಣ್ಯಾಧಿಕಾರಿಗಳ ಲೋಪ ಕಂಡುಬAದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದರು.
ರಾಜ್ಯದಲ್ಲಿ ಆನೆಗಳ ದಾಳಿಯಿಂದಲೇ ಅಧಿಕ ಸಾವು ಸಂಭವಿಸುತ್ತಿದೆ. ಕಳೆದ ಐದೂವರೆ ವರ್ಷದಲ್ಲಿ 148 ಜನರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. 2018-19ರಲ್ಲಿ 13 ಜನರು ಆನೆ ದಾಳಿಯಿಂದ ಮೃತಪಟ್ಟಿದ್ದರೆ, 2019 ರಿಂದ 21 ಅಮೂಲ್ಯ ಜೀವ ಹಾನಿ ಆಗಿದೆ. ಇದು ಅತ್ಯಂತ ಆತಂಕದ ವಿಚಾರ. ಆನೆ ಕಾರ್ಯಾಚರಣೆ ವೇಳೆ ಶಾರ್ಪ್ ಶೂಟರ್ ವೆಂಕಟೇಶ್ ಸೇರಿದಂತೆ ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಮೃತಪಟ್ಟಿದ್ದಾರೆ. ವನ್ಯಜೀವಿ ದಾಳಿಯಿಂದ ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬದವರಿಗೆ ಅಗಲಿಕೆಯ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಸೂಕ್ತ ಪರಿಹಾರ: ವನ್ಯ ಮೃಗಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಜೊತೆಗೆ 4 ವರ್ಷಗಳ ಕಾಲ 4 ಸಾವಿರ ರೂ. ಪಿಂಚಣಿಯನ್ನೂ ನೀಡಲಾಗುತ್ತಿದೆ. ನಾವು ನೀಡುವ ಪರಿಹಾರದಿಂದ ಜೀವ ಮರಳಿ ತರಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬಕ್ಕೆ ಆಸರೆ ಆಗುತ್ತದೆ ಎಂದು ತಿಳಿಸಿದರು.
ಹೊರ ಬಾರದಂತೆ ಮನವಿ : ಆನೆಗಳು ನಾಡಿಗೆ ಬಂದಾಗ, ಅರಣ್ಯ ಇಲಾಖೆಯವರು ಸಾಮಾಜಿಕ ತಾಣಗಳು, ಮಾಧ್ಯಮಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಾರೆ. ಆದರೂ ಕೆಲವರು ಮನೆಯಿಂದ ಹೊರಬಂದು ತಮ್ಮ ಜೀವ ಕಳೆದುಕೊಂಡಿದ್ದಾರೆ. ಆನೆಗಳ ಸಂಚಾರದ ಬಗ್ಗೆ ಮಾಹಿತಿ ಇದ್ದಾಗ, ಯಾರೂ ಕಾಡಿನ ಅಂಚಿಗೆ, ತೋಟಗಳಿಗೆ ಹೋಗಬಾರದು ಎಂದು ಮನವಿ ಮಾಡಿದರು.
ಹುಲಿ ದಾಳಿ ಬಾಲಕ ಸಾವು ? ಸಚಿವರ ಸಂತಾಪ: ನಿನ್ನೆ ನಾಗರಹೊಳೆ ವಲಯದಲ್ಲಿ ಹೆಗ್ಗಡ ದೇವನ ಕೋಟೆ ಬಳಿ 7 ವರ್ಷದ ಬಾಲಕ ಚರಣ್ ನಾಯಕ್ ನನ್ನು ಹುಲಿ ಕೊಂದಿರುವ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಹಿರಿಯ ಐ.ಎಫ್.ಎಸ್ ಅಧಿಕಾರಿ ಕುಮಾರ್ ಪುಷ್ಕರ್ ಅವರನ್ನು ಸ್ಥಳಕ್ಕೆ ಕಳಹಿಸಿದ್ದು, ಹುಲಿ ಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ ಎಂದು ತಿಳಿಸಿದರು.
ಶಾಶ್ವತ ಪರಿಹಾರ: ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಅಂದರೆ 6395 ಆನೆಗಳಿವೆ. ಆದರೆ ಅರಣ್ಯ ಇಲಾಖೆ ರೈಲ್ವೆ ಬ್ಯಾರಿಕೇಡ್, ಕಂದಕ ನಿರ್ಮಾಣ ಮತ್ತು ಸೌರ ವಿದ್ಯುತ್ ಬೇಲಿ ಹಾಕುತ್ತಿರುವ ಹಿನ್ನೆಲೆಯಲ್ಲಿ ಹಾಗೂ 7 ಆನೆ ಕಾರ್ಯಾಚರಣೆ ಪಡೆಗಳು, ನಾಡಿಗೆ ಬಂದ ಆನೆಗಳನ್ನು ತಕ್ಷಣವೇ ಕಾಡಿಗೆ ಅಟ್ಟುತ್ತಿರುವ ಹಿನ್ನೆಲೆಯಲ್ಲಿ ಹಾನಿ ತಗ್ಗಿದೆ. ಪ್ರತಿಯೊಂದು ಜೀವವೂ ಅಮೂಲ್ಯ. ಮಾನವ- ವನ್ಯಜೀವಿ ಸಂಘರ್ಷದಿಂದ ಪ್ರಾಣಿಯೂ ಸಾಯಬಾರದು, ಮನುಷ್ಯರೂ ಸಾಯಬಾರದು. ಆದಾಗ್ಯೂ ಆನೆಗಳ ದಾಳಿಯಿಂದ ಸಾವು ಸಂಭವಿಸದAತೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಅನ್ಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಸಾವು ಕಡಿಮೆ: ಜಾರ್ಖಂಡ್ ನಲ್ಲಿ ಕೇವಲ 700 ಆನೆಗಳಿವೆ. ಆದರೆ ಅಲ್ಲಿ ವರ್ಷದಲ್ಲಿ ಸರಾಸರಿ 80 ಸಾವು ಸಂಭವಿಸುತ್ತದೆ. ಪಶ್ಚಿಮ ಬಂಗಾಳದಲ್ಲಿ 750 ಆನೆಗಳಷ್ಟೇ ಇವೆ ಆದರೂ ಅಲ್ಲಿ 55 ಸಾವುಗಳು ಸಂಭವಿಸುತ್ತವೆ. ತಮಿಳುನಾಡಿನಲ್ಲಿ ವರ್ಷದಲ್ಲಿ ಸರಾಸರಿ 60, ಒಡಿಸ್ಸಾದಲ್ಲಿ 120, ಅಸ್ಸಾಂನಲ್ಲಿ ಸರಾಸರಿ 80 ಜನರು ಆನೆ ದಾಳಿಯಿಂದ ಮೃತಪಡುತ್ತಿದ್ದಾರೆ ನೆರೆಯ ಕೇರಳದಲ್ಲೂ ಈ ಸಂಖ್ಯೆ 100ಕ್ಕಿಂತ ಹೆಚ್ಚಾಗಿದೆ ಎಂದರು
ರೈಲ್ವೆ ಬ್ಯಾರಿಕೇಡ್ ಪರಿಹಾರ: ಕಂದಕ ಮತ್ತು ಸೌರ ತಂತಿ ಬೇಲಿಗೆ ಪ್ರತಿ ವರ್ಷ ನಿರ್ವಹಣಾ ವೆಚ್ಚ ಆಗುತ್ತದೆ. ಆದರೆ ರೈಲ್ವೆ ಬ್ಯಾರಿಕೇಡ್ ಉತ್ತಮ ಪರಿಹಾರ ಎಂದು ಭಾರತೀಯ ವಿಜ್ಞಾನ ಮಂದಿರ (ಐ.ಐ.ಎಸ್.ಸಿ.) ತಜ್ಞರ ವರದಿ ಹೇಳಿದೆ. ರಾಜ್ಯದಲ್ಲಿ ಆನೆ ಹಾವಳಿ ತಪ್ಪಿಸಲು ಸುಮಾರು 640 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಅಗತ್ಯವಿದೆ. ಈವರೆಗೆ 312 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಪ್ರತಿ ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಸುಮಾರು 1.50 ಕೋಟಿ ವೆಚ್ಚ ಆಗುತ್ತದೆ.
ಕ್ಯಾಂಪಾ ನಿಧಿ ಬಂದಿಲ್ಲ: ಕ್ಯಾಂಪಾ ನಿಧಿಯಲ್ಲಿ ನಮ್ಮದೇ 500 ಕೋಟಿ ರೂ. ಅನುದಾನ ಇದೆ. ತಾವು ದೆಹಲಿಗೆ ಹೋದಾಗ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರನ್ನು ಭೇಟಿ ಮಾಡಿ ಕ್ಯಾಂಪಾ ನಿಧಿ ಅಡಿ ಇರುವ ಹಣ ಬಿಡುಗಡೆ ಮಾಡಿದರೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಬಹುದು ಎಂದು ಮನವಿ ಮಾಡಿದೆ. ಆದರೆ 1.5 ಕೋಟಿ ವೆಚ್ಚ ಮಾಡಿ ರೈಲ್ವೆ ಬ್ಯಾರಿಕೇಡ್ ಏಕೆ ಮಾಡಬೇಕು ಎಂದು ಪ್ರಶ್ನಿಸುತ್ತಾರೆ. ಜೀವಕ್ಕಿಂತ ಹಣ ಮುಖ್ಯ ಅಲ್ಲ ಎಂದು ಈಶ್ವರ ಖಂಡ್ರೆ ಹೇಳಿದರು.
38 ಆನೆಗಳ ಸಾವು: ರಾಜ್ಯದಲ್ಲಿ ಈ ವರ್ಷ 38 ಆನೆಗಳು ಮೃತಪಟ್ಟಿವೆ. ಈ ಪೈಕಿ 1 ಆನೆ ರೈಲು ಡಿಕ್ಕಿಯಿಂದ ಸತ್ತಿದ್ದರೆ, ವಿದ್ಯುತ್ ಸ್ಪರ್ಶದಿಂದ 10 ಆನೆಗಳು ಮೃತಪಟ್ಟಿವೆ. 2 ಆನೆಗಳು ಗುಂಡಿನೇಟಿನಿಂದ ಸಾವಿಗೀಡಾಗಿದ್ದರೆ 25 ಆನೆಗಳು ಸ್ವಾಭಾವಿಕ ಸಾವು ಕಂಡಿವೆ ಎಂದೂ ಸಚಿವರು ವಿವರಿಸಿದರು.
ಪರಿಸರ ಸ್ನೇಹಿ ಗಣಪನ ಪೂಜಿಸಲು ಮನವಿ: ಪ್ರಕೃತಿ ಪರಿಸರ ಉಳಿಸಬೇಕಾದ್ದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಪರಿಸರ ಸ್ನೇಹಿಯಾದ ರಾಸಾಯನಿಕ ಬಣ್ಣ ರಹಿತ ಮಣ್ಣಿನ ಗಣಪತಿ ಪೂಜಿಸಲು ಮತ್ತು. ಜಲ ಮೂಲಗಳನ್ನು ನಾಶ ಮಾಡುವ ರಾಸಾಯನಿಕ ಬಣ್ಣ ಬಳಿದ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಂದ ತಯಾರಿಸಿದ ಗಣಪತಿಗಳನ್ನು ಖರೀದಿಸದಂತೆ ಈಶ್ವರ ಖಂಡ್ರೆ ಮನವಿ ಮಾಡಿದರು.
ಪರಿಸರ ಇಲಾಖೆ ಸುಧಾರಣೆ: ಪರಿಸರ ಇಲಾಖೆಯಲ್ಲಿ ಕೆಲವೊಂದು ಸುಧಾರಣೆ ಅನಿವಾರ್ಯವಾಗಿದೆ. ಪಾರದರ್ಶಕವಾಗಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯ ನಿರ್ವಹಿಸುವಂತೆ ಮಾಡಲು ಸರ್ಕಾರ ಕೆಲವೊಂದು ಮಾರ್ಪಾಡು ಮಾಡಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ