ಚಿತ್ರದುರ್ಗ:
ಜಾತಿ ಕಾರಣಕ್ಕೆ ಚನ್ನಕೇಶವ ದೇವಸ್ಥಾನದ ಗರ್ಭಗುಡಿಗೆ ತಮಗೆ ಅವಕಾಶ ನೀಡಲಿಲ್ಲ ಎಂದು ಕನಕ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಆರೋಪ ಮಾಡಿದ್ದಾರೆ.
ನಿನ್ನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆದ ಪರಿವರ್ತನೆ ಹಾದಿಯಲ್ಲಿ ಮಠಗಳು ಗೋಷ್ಠಿಯಲ್ಲಿ ಮಾತನಾಡಿದ ಈಶ್ವರಾನಂದಪುರಿ ಸ್ವಾಮೀಜಿ, ಬಾಗೂರು ಗ್ರಾಮದ ಚನ್ನಕೇಶವ ದೇವಸ್ಥಾನದ ಗರ್ಭಗುಡಿಗೆ ಬಿಡಲಿಲ್ಲ. ನಾವು ದೇವಸ್ಥಾನಕ್ಕೆ ಹೋಗಿದ್ದೆವೆಂಬ ಕಾರಣಕ್ಕೆ ಅಲ್ಲಿ ಸ್ವಚ್ಛಗೊಳಿಸಿದ್ದಾರೆ ಎಂದರು.
ಕುರುಬ ಸಮುದಾಯದ ಸ್ವಾಮೀಜಿ ಒಳಗೆ ಬಂದರೆಂಬ ಕಾರಣಕ್ಕೆ ಸ್ವಚ್ಛಗೊಳಿಸಿದ್ದಾರೆ. ನಾವು ಹೋಗಿದ್ದಕ್ಕಾಗಿ ದೇಗುಲ ಸ್ವಚ್ಛವಾಯಿತೆಂದು ಹೇಳಿದ ಅವರು, ಇನ್ಮುಂದೆ ಎಂದಿಗೂ ಚನ್ನಕೇಶವ ದೇವಸ್ಥಾನಕ್ಕೆ ನಾವು ಹೋಗುವುದಿಲ್ಲ ಎಂದು ಬೇಸರದಿಂದ ಹೇಳಿದರು.
ವೈಕುಂಠ ಏಕಾದಶಿಗೆ ದೇಗುಲಕ್ಕೆ ಹೋಗಿದ್ದಾಗ ನರಕ ತೋರಿಸಿಬಿಟ್ಟರು. ಪೂಜಾರಿ ಹೆಣ್ಣುಮಕ್ಕಳಿಗೆಲ್ಲಾ ಗರ್ಭಗುಡಿ ಪ್ರವೇಶಿಸಲು ಬಿಟ್ಟಿದ್ದರು. ಮಠಾಧೀಶರಾದ ನಮಗೇ ಚನ್ನಕೇಶವ ದೇಗುಲದ ಗರ್ಭಗುಡಿಗೆ ಬಿಡಲಿಲ್ಲ. ಮುಜರಾಯಿ ಇಲಾಖೆ ದೇಗುಲ ಎಂದು ಗೊತ್ತಿದ್ದರೆ ಪ್ರತಿಭಟಿಸುತ್ತಿದ್ದೆವು. ಉಡುಪಿಯಲ್ಲಿ ಕನಕದಾಸರು ಪ್ರತಿಭಟಿಸಿದಂತೆ ಪ್ರತಿಭಟನೆ ಮಾಡ್ತಿದ್ದೆವು. ಆದರೆ, ಆಗ ಮುಜರಾಯಿ ಇಲಾಖೆ ದೇಗುಲ ಎಂಬುದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದರು.