ತುಮಕೂರು:
ಜಪಾನ್ ದೇಶವು ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿ ಭಾರತದೊಡನೆ ಅತ್ಯುತ್ತಮ ರಾಜಕೀಯ, ವಾಣಿಜ್ಯ ಮತ್ತು ಔದ್ಯೋಗಿಕ ಸಂಬಂಧಗಳನ್ನು ಹೊಂದಿದ್ದು ವಿದ್ಯುನ್ಮಾನ, ವಾಹನ ತಯಾರಿಕೆ, ವೈದ್ಯಕೀಯ, ದೂರಸಂಪರ್ಕ, ಎಂಜಿನಿಯರಿಂಗ್, ಇತರೆ ಕ್ಷೇತ್ರಗಳಲ್ಲಿ ತನ್ನ ಹೆಸರಾಂತ ಕಂಪನಿಗಳ ಮೂಲಕ ಅಪಾರ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳನ್ನು ಭಾರತದ ಜನತೆಗೆ ತೆರೆದಿಟ್ಟಿದೆ ಎಂದು ಶ್ರೀದೇವಿ ಚ್ಯಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷರು ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದರು.
ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಜಪಾನೀಸ್ ಭಾಷಾ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಾ, ಜಪಾನ್ ದೇಶವು ತನ್ನ ತಾಂತ್ರಿಕ ವಿಚಾರಗಳನ್ನು ಜಪಾನೀಸ್ ಭಾಷೆಯಲ್ಲಿ ಸ್ಪಷ್ಟವಾಗಿ ತಿಳಿಸಿ, ನಂತರ ಇತರ ಭಾಷೆಗಳಿಗೆ ತರ್ಜುಮೆ ಮಾಡುವುದರಿಂದ ಜಪಾನೀಸ್ ಭಾಷೆಯನ್ನು ಎಂಜಿನಿಯರಿಂಗ್, ವೈದ್ಯಕೀಯ, ವಾಹನ ತಯಾರಿಕೆ, ದೂರಸಂಪರ್ಕ ಉಪಕರಣಗಳು, ಇತರೆ ಕ್ಷೇತ್ರಗಳಲ್ಲಿನ ವಿದ್ಯಾರ್ಥಿಗಳು ಮತ್ತು ನಿಪುಣರು ಕಲಿತರೆ ಇನ್ನೂ ಹೆಚ್ಚಿನ ಪರಿಣತಿ ಮತ್ತು ಆರ್ಥಿಕ ಅವಕಾಶಗಳ ಬಾಗಿಲು ತೆರೆದಂತಾಗುತ್ತದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಜಪಾನೀಸ್ ಭಾಷಾ ಕಲಿಕೆಗೆ ಅವಕಾಶ ಮತ್ತು ಉತ್ತೇಜನ ನೀಡಲು ಬೆಂಗಳೂರಿನ ಜಪಾನೀಸ್ ಭಾಷಾ ಶಿಕ್ಷಣ ನೀಡಬಲ್ಲ 21 ವರ್ಷಗಳ ಪರಿಣಿತ ಅನುಭವಿ ಸಂಸ್ಥೆಯಾದ “ಸಕುರಾ ನಿಹಾಂಗೋ ರಿಸೋರ್ಸ್ ಸೆಂಟರ್ ಜೊತೆ ಪರಸ್ಪರ ಒಡಂಬಡಿಕೆ ಒಪ್ಪಂದ ಮಾಡಿಕೊಂಡು ಸಹಿ ಹಾಕಿದರು.
ಈ ಸಂದರ್ಭದಲ್ಲಿ ಸಕುರಾ ನಿಹಾಂಗೋ ರಿಸೋರ್ಸ್ ಸೆಂಟರ್‍ನ ನಿರ್ದೇಶಕ ರಮಾ ತಮ್ಮ ಸಂಸ್ಥೆಯಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶ್ರೀದೇವಿ ವೈದ್ಯಕೀಯ ನಿರ್ದೇಶಕÀ ಡಾ.ರಮಣ್ ಎಂ.ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಟ್ರಸ್ಟಿಯಾದ ಅಂಬಿಕಾ.ಎಂ ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಸಕುರಾ ನಿಹಾಂಗೋ ನಿರ್ದೇಶಕ ಅನಂತ ಪದ್ಮನಾಭನ್ ಮತ್ತು ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ನರೇಂದ್ರ ವಿಶ್ವನಾಥ್, ಉದ್ಯೋಗ ಹಾಗೂ ತರಬೇತಿ ವಿಭಾಗದ ಅಧಿಕಾರಿ ಪ್ರೊ.ಎಂ.ಅಂಜನಮೂರ್ತಿ ಹಾಗೂ ಇತರೆ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಪಾನೀಸ್ ಭಾಷಾ ಕಲಿಕೆಯ ಅವಕಾಶಗಳನ್ನು ಶ್ರೀದೇವಿ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗಷ್ಟೆ ಅಲ್ಲದೆ ಇತರೆ ಸಾರ್ವಜನಿಕ ಕಲಿಕಾಸಕ್ತರಿಗೂ ವಿಸ್ತರಿಸಲಾಗುವುದು. ಈ ಸಂಬಂಧದ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಗೆ 9448118627 ಕರೆ ಮಾಡಿ ಮಾಹಿತಿ ಪಡೆಯಬಹುದೆಂದು ಮಾನವ ಸಂಪನ್ಮೂಲ ನಿರ್ದೇಶಕ ಎಂ.ಎಸ್.ಪಾಟೀಲ್ ತಿಳಿಸಿದರು.
ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಪಾನೀಸ್ ಭಾಷಾ ಕಲಿಕಾ ಕೇಂದ್ರವನ್ನು ಉದ್ಘಾಟಿಸಲಾಯಿತು. ಶ್ರೀದೇವಿ ಚ್ಯಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ನರೇಂದ್ರ ವಿಶ್ವನಾಥ್ ಮತ್ತಿತರರು ಇದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
