ಭಾರತ- ಪಾಕ್‌ ನಡುವೆ ಯುದ್ಧದ ವಾತಾವರಣ; ಸಭೆ ಕರೆದ ಯುರೋಪಿಯನ್‌ ಒಕ್ಕೂಟ

ನವದೆಹಲಿ:

     ಪಹಲ್ಗಾಮ್‌ನಲ್ಲಿ  ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನನ ನಡುವೆ ಯುದ್ದದ ವಾತಾವರಣ ಏರ್ಪಟ್ಟಿದೆ. ಪ್ರತೀಕಾರವಾಗಿ ಭಾರತವು ಪಾಕ್‌ ವಿರುದ್ಧ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಶುಕ್ರವಾರ ಯುರೋಪಿಯನ್ ಒಕ್ಕೂಟದ  ಪ್ರತಿನಿಧಿ ಕಾಜಾ ಕಲ್ಲಾಸ್ ಅವರೊಂದಿಗೆ ಮಾತನಾಡಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಚರ್ಚಿಸಿದ್ದಾರೆ. ಫೋನ್ ಸಂಭಾಷಣೆಯ ನಂತರ, ಜೈಶಂಕರ್ ಯುರೋಪಿಯನ್ ಒಕ್ಕೂಟದ ಎಲ್ಲಾ ಸದಸ್ಯರುಗಳು ಭಯೋತ್ಪಾದನೆಯನ್ನು ಖಂಡಿಸಿದ್ದಾರೆ ಎಂದು ಹೇಳಿದರು.

    ಭಯೋತ್ಪಾದಕ ದಾಳಿ ಬಳಿಕ ಭಾರತವು ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಊಹಾಪೋಹಗಳ ನಡುವೆ, ಉದ್ವಿಗ್ನತೆಯನ್ನು ಶಮನಗೊಳಿಸಲು ಯುರೋಪಿಯನ್ ಒಕ್ಕೂಟವು ಪಾಕಿಸ್ತಾನ ಹಾಗೂ ಭಾರತಕ್ಕೆ ಮಾತುಕತೆಗೆ ಆಹ್ವಾನಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಉದ್ವಿಗ್ನತೆಯನ್ನು ತಗ್ಗಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಒತ್ತಾಯಿಸಿದ ಎರಡು ದಿನಗಳ ನಂತರ ಭಾರತ ಮತ್ತು ಪಾಕಿಸ್ತಾನಕ್ಕೆ ಸಂಯಮದಿಂದ ಇರಬೇಕೆಂದು ಯುರೋಪಿಯನ್ ಒಕ್ಕೂಟವು ಕರೆ ನೀಡಿದೆ.

   ಇತ್ತೀಚೆಗೆ ವಿದೇಶಾಂಗ ಸಚಿವರ ಜೊತೆ ಫೋನ್‌ ಕರೆಯಲ್ಲಿ ಮಾತನಾಡಿದ್ದ ಮಾರ್ಕ್‌ ರುಬಿಯೋ ಅವರು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಭಯೋತ್ಪಾದಕ ದಾಳಿಯಲ್ಲಿ ಜೀವಹಾನಿಗೆ ರೂಬಿಯೊ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ದಕ್ಷಿಣ ಏಷ್ಯಾದಲ್ಲಿ “ಉದ್ವಿಗ್ನತೆಯನ್ನು ಕಡಿಮೆ ಮಾಡಲು” ಮತ್ತು ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವಂತೆ ಭಾರತವನ್ನು ಕೇಳಿಕೊಂಡಿದ್ದರು.

   ಭಾರತ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಯುದ್ಧವನ್ನು ಸಾರಿದೆ. ಪಾಕಿಸ್ತಾನದಿಂದ ನೇರ ಅಥವಾ ಪರೋಕ್ಷ ಸರಕುಗಳ ಆಮದನ್ನು ನಿಷೇಧಿಸಿದೆ ಎಂದು ವಾಣಿಜ್ಯ ಸಚಿವಾಲಯ  ತಿಳಿಸಿದೆ. ಪಾಕಿಸ್ತಾನದಿಂದ ನೇರ ಆಮದುಗಳು ಕಡಿಮೆಯಿದ್ದರೂ, ಅಫ್ಘಾನಿಸ್ತಾನ ಹಾಗೂ ಇತರ ದೇಶಗಳಿಂದ ಪಾಕಿಸ್ತಾನದ ಮಾರ್ಗವೇ ಭಾರತಕ್ಕೆ ಆಮದಾಗುತ್ತಿತ್ತು. ಇನ್ನು ಈಗಾಗಲೇ ವಾಘಾ- ಅಟ್ಟಾರಿ ಗಡಿಯನ್ನು ಮುಚ್ಚಲಾಗಿದ್ದು, ಪಾಕಿಸ್ತಾನಿ ಪ್ರಜೆಗಳನ್ನು ಭಾರತದಿಂದ ಹೊರಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ. 

   1960 ರಲ್ಲಿ ಭಾರತ ಪಾಕ್‌ ನಡುವೆ ನಡೆದಿದ್ದ ಸಿಂಧೂ ನದಿ ಒಪ್ಪಂದವನ್ನು ರದ್ದು ಮಾಡಿ ಭಾರತ ಪಾಕಿಸ್ತಾನಕ್ಕೆ ಬಹುದೊಡ್ಡ ಆಘಾತವನ್ನು ನೀಡಿದೆ. 16 ಪಾಕಿಸ್ತಾನಿ ಯೂಟ್ಯೂಬ್‌ಗಳನ್ನು ನಿಷೇಧಿಸಿತ್ತು. ನಂತರ ಪಾಕಿಸ್ತಾನದ ನಟಿಯರಾದ ನಟಿಯರಾದ ಮಹಿರಾ ಖಾನ್, ಹನಿಯಾ ಆಮಿರ್  ಮತ್ತು ಅಲಿ ಜಾಫರ್ ಸೇರಿದಂತೆ ಜನಪ್ರಿಯ ಪಾಕಿಸ್ತಾನಿ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬುಧವಾರ ಸಂಜೆ ಭಾರತದಲ್ಲಿ ನಿರ್ಬಂಧಿಸಲಾಗಿದೆ. ಪಾಕಿಸ್ತಾನದ ಕೆಲ ಸುದ್ದಿ ವಾಹಿನಿಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

Recent Articles

spot_img

Related Stories

Share via
Copy link