ಅಯ್ಯಪ್ಪ ದರ್ಶನ ಗೊಂದಲ : ಎಲ್ಲವೂ ನಿಯಂತ್ರಣದಲ್ಲಿದೆ : ಕೇರಳ ಸರ್ಕಾರ

ತಿರುವನಂತಪುರಂ:

   ಶಬರಿಮಲೈನಲ್ಲಿರುವ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆಂದು ವ್ರತ ಆಚರಿಸಿ ಶಬರಿಮಲೆಗೆ ತೆರಳಿದ್ದ ಹಲವು ರಾಜ್ಯಗಳ ಭಕ್ತರು, ಅಯ್ಯಪ್ಪನ ದರ್ಶನ ಮಾಡಲಾಗದೆಯೇ ವಾಪಸ್ಸಾಗುತ್ತಿರುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ಹೇಳಲಾಗುತ್ತಿದೆ.ದೇವರ ದರ್ಶನಕ್ಕೆ ಭಕ್ತರು ಹಲವು ಗಂಟೆಗಳ ಕಾಲ ಅನ್ನ, ನೀರು ಇಲ್ಲದೇ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.

    ಭಕ್ತರ ನಿರ್ವಹಣೆ, ಭಕ್ತರ ವಾಹನಗಳ ನಿರ್ವಹಣೆಯಲ್ಲಿ ಟ್ರಾವಂಕೂರು ದೇವಸ್ಥಾನ ಮಂಡಳಿ ಮತ್ತು ಪೊಲೀಸರು ಪೂರ್ಣ ವಿಫಲರಾಗಿದ್ದು, ಇದರ ಪರಿಣಾಮ ಭಕ್ತರು ಕೇರಳ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ನಡುವೆ ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಪೊಲೀಸರು ಭಕ್ತರ ಮೇಲೆಯೇ ಹಲ್ಲೆ ನಡೆಸಿದ್ದು, ಈ ಕುರಿತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಮೊದಲು ಮೊದಲು ಪಂಬೆಯಲ್ಲಿ ಪಾರ್ಕ್‌ ಮಾಡಿ ದೇವಸ್ಥಾನಕ್ಕೆ ಭಕ್ತರು ತೆರಳಬಹುದಿತ್ತು. ಆದರೆ, ಈಗ ಕೇರಳ ಸರ್ಕಾರ ನಿಲಕ್ಕಲ್‌ನಲ್ಲಿ ಭಕ್ತರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಿದೆ. ಇಲ್ಲಿಂದ ಸರ್ಕಾರಿ ಬಸ್ಸಿನ ಮೂಲಕ ಭಕ್ತರು ಹೋಗುತ್ತಿದ್ದಾರೆ. ಅವ್ಯವಸ್ಥೆಯ ಕಾರಣದಿಂದ ದರ್ಶನ ಸಿಗದೇ ಕರ್ನಾಟಕ, ತಮಿಳುನಾಡು, ಆಂಧ್ರ ಸೇರಿ ಹಲವು ರಾಜ್ಯಗಳ ಭಕ್ತರು ಪಂದಳಂನಿಂದಲೇ ಹಿಂದಿರುಗುತ್ತಿದ್ದಾರೆ.

    ಭಕ್ತರಿಂದ ಆಕ್ರೋಶ ಹಾಗೂ ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ದೇವಾಲಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ದೇವಾಲಯದ ಆವರಣದಲ್ಲಿ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಮಾಡಲಾಗಿರುವ ವ್ಯವಸ್ಥೆ ಹಾಗೂ ಸೌಕರ್ಯಗಳ ಬಗ್ಗೆ ತಿಳಿಸಬೇಕಿದೆ, ದಟ್ಟಣೆಯನ್ನು ನಿರ್ವಹಿಸಲು ಮತ್ತಷ್ಟು ಸಂಘಟಿತ ವ್ಯವಸ್ಥೆ ಖಾತ್ರಿಪಡಿಸಬೇಕು. ಯಾತ್ರಿಕರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಹೇಳಿದ್ದಾರೆ.

    ಡಿಸೆಂಬರ್‌ 6 ರಿಂದ ಯಾತ್ರಿಕರ ಸಂಖ್ಯೆ 88,000 ಸಾವಿರಕ್ಕೆ ಏರಿಕೆಯಾಗಿರುವುದರಿಂದ ನೂಕುನುಗ್ಗಲು ಉಂಟಾಗಿದೆ. ಈ ಸಮಸ್ಯೆ ಪರಿಹರಿಸಲು ದರ್ಶನದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap