ತುಮಕೂರು :
ದೇಹವನ್ನು ದೇವಾಲಯವಾಗಿ ಮಾಡುವುದೇ ಲಿಂಗದೀಕ್ಷೆಯ ಉದ್ದೇಶ. ನೀವು ಮಾಡುವ ಪ್ರತಿಯೊಂದು ಕ್ರಿಯಾ ಪ್ರತಿಕ್ರಿಯೆಯೂ ಪೂಜೆಯಾಗಬೇಕು ಎಂದು ಹಿರೇಮಠಾಧ್ಯಕ್ಷರಾದ ಡಾ.ಶ್ರೀ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಹಿರೇಮಠದಲ್ಲಿ ನಡೆದ ಲಿಂಗದೀಕ್ಷಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ನಿತ್ಯದಲ್ಲೂ ಲಿಂಗಪೂಜೆ ಮಾಡಬೇಕು. ಲಿಂಗದೀಕ್ಷೆ ಎಂದರೆ ದೇಹಕ್ಕೆ ಗುಡಿದೀಕ್ಷೆ ಕೊಡುವುದು ಎಂದರ್ಥ ಎಂದು ಹೇಳಿದರು.
ನಮ್ಮ ಯುವಜನಾಂಗಕ್ಕೆ ಧರ್ಮದ ಕುರಿತಾಗಿ ಸರಿಯಾದ ತಿಳುವಳಿಕೆಯನ್ನು ಕೊಟ್ಟು ಅವರು ಧರ್ಮಮಾರ್ಗದಲ್ಲಿ ನಡೆಯುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವಕ, ಯುವತಿಯರಿಗೆ ಲಿಂಗಧಾರಣ ಮಾಡಿಸಿ ಅವರನ್ನು ಲಿಂಗಾಯತರನ್ನಾಗಿ ಮಾಡುವುದಕ್ಕಿಂತ ಅವರನ್ನು ಗುಣವಂತರು ಮತ್ತು ಸಂಸ್ಕಾರವಂತರನ್ನಾಗಿಸುವುದು ಮುಖ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಧರ್ಮದ ಅರ್ಥವೇ ಬದಲಾಗಿಹೋಗಿದೆ. ಧರ್ಮವೆಂದರೆ ಈಗ ಶೋ ಮತ್ತು ಶೋಕಿಲಾಲ್ ಆಗಿಬಿಟ್ಟಿದೆ. ಧರ್ಮವು ದಿನೇ ದಿನೇ ಉನ್ಮಾದವಾಗಿ ಪರಿಣಮಿಸುತ್ತಿದೆ ಮತ್ತು ನಮ್ಮ ವಿವೇಕ, ವಿವೇಚನೆಗಳಿಗೆ ಕಡಿವಾಣ ಹಾಕುತ್ತಿದೆ. ಆದರೆ, ಧರ್ಮವೆಂದರೆ ಸಂಸ್ಕಾರ, ಶಾಂತಿ, ನೆಮ್ಮದಿ, ಸೌಹಾರ್ದ, ಸಹಿಷ್ಣುತೆಯಾಗಿದೆ ಎಂದು ವ್ಯಾಖ್ಯಾನಿಸಿದರು.
ಈಗ ಧರ್ಮವು ದಮನ, ಅಟ್ಟಹಾಸ, ಆರ್ಭಟ, ಆಕ್ರೋಶ, ಆಮಿಷ, ಉಪದ್ರವ, ದ್ವೇಷ, ಅಸೂಯೆ, ಮತಾಂತರ, ದೊಂಬಿ, ಮೈಕ್ ಹಾಕಿಕೊಂಡು ಕೂಗುವುದು, ಧರ್ಮವೆಂದರೆ ಡಿ.ಜೆ. ಹಾಕಿಕೊಂಡು ಕುಣಿಯುವುದೇ ಆಗಿದೆ ಎಂದು ಸೂಚ್ಯವಾಗಿ ನುಡಿದರು.
ಲಿಂಗದೀಕ್ಷಾ ಕಾರ್ಯಕ್ರಮದಲ್ಲಿ ಮಠದ ವ್ಯವಸ್ಥಾಪಕ ಕೆ.ಆರ್. ಜಗನ್ನಾಥ್, ಬಾಬು ರಾಜೇಂದ್ರಪ್ರಸಾದ್, ಬಸವರಾಜ ಪಡಶೆಟ್ಟಿ, ಶಶಿಧರ, ಆರ್.ಎಸ್. ಉಮೇಶ್, ಪುಷ್ಪಾ ಜಗನ್ನಾಥ್, ಶಿವಮ್ಮ ಚಂದ್ರಶೇಖರ್, ಜಯರತ್ನಾ ಉದಯ್, ಸರ್ವಂಗಳಮ್ಮ ಶಂಕ್ರಪ್ಪ, ಭಾರತಿ ಶಶಿಧರ್, ಸುಮಾ ರವಿಶಂಕರ್, ಸಿದ್ಧರಾಮಣ್ಣ, ಭಾಗವಹಿಸಿದ್ದರು.