‌ಪಾಕಿಸ್ಥಾನ : ಮಾಜಿ ಪ್ರಧಾನಮಂತ್ರಿಗೆ ತಾತ್ಕಾಲಿಕ ರಿಲೀಫ್

ನವದೆಹಲಿ:

     ಪಾಕಿಸ್ತಾನದ ಉನ್ನತ ನ್ಯಾಯಾಲಯ ಮೇ 9 ರ ನಂತರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ದಾಖಲಾಗಿರುವ ಯಾವುದೇ ಪ್ರಕರಣದಲ್ಲಿ ಅವರನ್ನು ಬಂಧಿಸದಂತೆ ಹೊರಡಿಸಿದ್ದ ಆದೇಶವನ್ನು ಮೇ 31 ರವರೆಗೆ ವಿಸ್ತರಿಸಿದೆ.

     70 ವರ್ಷದ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಲು ಸರ್ಕಾರಿ ವಕೀಲರು ಹೆಚ್ಚಿನ ಸಮಯ ಕೋರಿದ ನಂತರ ಇಸ್ಲಾಮಾಬಾದ್ ಹೈಕೋರ್ಟ್ ಈ ತೀರ್ಪು ನೀಡಿದೆ.

     ಖಾನ್ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿವರಗಳನ್ನು ಕೋರಿ ಪಿಟಿಐ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ವಿಚಾರಣೆ ನಡೆಸುತ್ತಿದೆ. ಪಿಟಿಐ ಮುಖ್ಯಸ್ಥರ ವಿರುದ್ಧ ದೇಶಾದ್ಯಂತ 100ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಖಾನ್ ಅವರ ಪಕ್ಷ ಹೇಳಿದೆ.

    ಸರ್ಕಾರಿ ವಕೀಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

    ಇಸ್ಲಾಮಾಬಾದ್ ಹೈಕೋರ್ಟ್, ಕಳೆದ ಶುಕ್ರವಾರ ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಖಾನ್ ಅವರಿಗೆ ಎರಡು ವಾರಗಳ ಕಾಲ ನಿರೀಕ್ಷಣಾ ಜಾಮೀನು ನೀಡಿದೆ ಮತ್ತು ಮೇ 15 ರವರೆಗೆ ದೇಶದಲ್ಲಿ  ದಾಖಲಾದ ಯಾವುದೇ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿಯನ್ನು ಬಂಧಿಸದಂತೆ ನಿರ್ಬಂಧಿಸಿದೆ.ಮೇ 9 ರಂದು ಹೈಕೋರ್ಟ್ ಆವರಣದಿಂದ ಖಾನ್‌ರನ್ನು ನಾಟಕೀಯ ರೀತಿಯಲ್ಲಿ ಬಂಧಿಸಿರುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ