ನವದೆಹಲಿ:
ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಕಂಡಿದ್ದ ಎಎಪಿ ನಾಯಕ ಹಾಗೂ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ತಮ್ಮ ಕ್ಷೇತ್ರದ ಕಚೇರಿಯಲ್ಲಿದ್ದ ಎಸಿ, ಟಿವಿ, ಸ್ಪೀಕರ್, ಕುರ್ಚಿ, ಟೇಬಲ್ ಗಳನ್ನು ಕೊದ್ದೊಯ್ದಿದ್ದಾರೆ ಎಂದು ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ಗಂಭೀರ ಆರೋಪ ಮಾಡಿದ್ದಾರೆ.
ಪತ್ಪರ್‌ಗಂಜ್‌ನ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ನಿನ್ನೆ ತಮ್ಮ ಕ್ಷೇತ್ರದ ಶಾಸಕರ ಕಚೇರಿಗೆ ತೆರಳಿದ್ದರು. ಈ ವೇಳೆ ಕಚೇರಿಯಲ್ಲಿದ್ದ ಪೀಠೋಪಕರಣಗಳು, ಎಸಿ, ಟಿವಿ, ಸ್ಪೀಕರ್, ಕುರ್ಚಿ, ಟೇಬಲ್ ಗಳು ನಾಪತ್ತೆಯಾಗಿದ್ದು, ಇವೆಲ್ಲವನ್ನೂ ಮನೀಶ್ ಸಿಸೋಡಿಯಾ ಹೊತ್ತೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ. ‘ಮಾಜಿ ಶಾಸಕ ಮನೀಶ್ ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ಪ್ರದೇಶದ ಶಾಸಕರ ಕಚೇರಿಯಿಂದ ಎಲ್ಲಾ ಸರ್ಕಾರಿ ವಸ್ತುಗಳನ್ನು ಕದ್ದಿದ್ದಾರೆ ಎಂದು ರವೀಂದರ್ ಸಿಂಗ್ ನೇಗಿ ಆರೋಪಿಸಿದ್ದಾರೆ.
ಸಿಸೋಡಿಯಾ ಅವರು ಎಸಿಗಳು, ಟೆಲಿವಿಷನ್‌ಗಳು, ಕುರ್ಚಿಗಳು, ಫ್ಯಾನ್‌ಗಳು, ಎಲ್‌ಇಡಿಗಳು ಮತ್ತು ಎಲ್ಲವನ್ನೂ ಕದ್ದಿದ್ದಾರೆ ಎಂದು ಅವರು ಹೇಳಿದ್ದಾರೆ.
“ಆಮ್ ಆದ್ಮಿ ಪಕ್ಷದ ಪತ್ಪರ್‌ಗಂಜ್‌ನ ಮಾಜಿ ಶಾಸಕ @msisodia ಚುನಾವಣೆಗೆ ಮೊದಲೇ ತಮ್ಮ ನಿಜವಾದ ಮುಖವನ್ನು ತೋರಿಸಿದ್ದರು. ಎಸಿ, ಟಿವಿ, ಟೇಬಲ್, ಕುರ್ಚಿ ಮತ್ತು ಫ್ಯಾನ್‌ನಂತಹ ವಸ್ತುಗಳನ್ನು ಶಾಸಕರ ಶಿಬಿರ ಕಚೇರಿಯಿಂದ ಕದ್ದಿದ್ದಾರೆ. ಅವರ ಭ್ರಷ್ಟಾಚಾರ ಮತ್ತೊಮ್ಮೆ ಎಲ್ಲಾ ಮಿತಿಗಳನ್ನು ಮೀರಿದೆ. ಈಗ ಅವರು ತಮ್ಮ ವಾಸ್ತವವನ್ನು ಮರೆಮಾಚುವ ಮತ್ತು ಕದಿಯುವ ರಾಜಕೀಯದಲ್ಲಿ ಪರಿಣಿತರಾಗಿದ್ದಾರೆ. ನಾವು ಜನರ ಹಕ್ಕುಗಳನ್ನು ರಕ್ಷಿಸುತ್ತೇವೆ ಮತ್ತು ಅಂತಹ ಭ್ರಷ್ಟ ಜನರನ್ನು ಬಹಿರಂಗಪಡಿಸುತ್ತೇವೆ” ಎಂದು ನೇಗಿ ತಾವು ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಅಂತೆಯೇ ತಮ್ಮ ಮಾತು ಮುಂದುವರೆಸಿದ ನೇಗಿ, ಈಗ ನಾಪತ್ತೆಯಾಗಿರುವ ವಸ್ತುಗಳನ್ನು ಖಂಡಿತಾ ವಾಪಸ್ ಪಡೆಯುತ್ತೇವೆ. ಇದು ಸಾರ್ವಜನಿಕರ ಆಸ್ತಿ… ಅವುಗಳ ರಕ್ಷಣೆ ನಮ್ಮ ಹೊಣೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಸೋಡಿಯಾ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅವರು ಹೊತ್ತೊಯ್ದಿರುವ ಎಲ್ಲ ವಸ್ತುಗಳಿಗೂ ಅವರಿಂದಲೇ ದಂಡ ಕಟ್ಟಿಸುತ್ತೇವೆ. ಒಂದೇ ಒಂದು ರೂಪಾಯಿಯನ್ನೂ ಬಿಡುವುದಿಲ್ಲ ಎಂದು ನೇಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿಯ ನೇಗಿ ಇದೇ ಪತ್ಪರ್‌ಗಂಜ್ ಕ್ಷೇತ್ರದಲ್ಲಿ 28,072 ಮತಗಳಿಂದ ಗೆದ್ದಿದ್ದರು. ಅವರು 70,060 ಮತಗಳನ್ನು ಪಡೆದರೆ, ಎಎಪಿಯ ಅವಧ್ ಓಜಾ 45,928 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು. ಎಎಪಿ ಪಟ್ಪರ್‌ಗಂಜ್‌ನಿಂದ ತನ್ನ ಅಭ್ಯರ್ಥಿಯನ್ನು ಬದಲಾಯಿಸಿತ್ತು. ಅಲ್ಲಿನ ಹಾಲಿ ಶಾಸಕರಾಗಿದ್ದ ಸಿಸೋಡಿಯಾ ಜಂಗ್‌ಪುರ ಸ್ಥಾನದಿಂದ ಸ್ಪರ್ಧಿಸಿದ್ದರು, ಅಲ್ಲಿ ಅವರು ಹೀನಾಯ ಸೋಲು ಕಂಡಿದ್ದರು.
