ಬೆಂಗಳೂರು:
ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಕಾಗೇರಿ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಬಿಜೆಪಿ ನಾಯಕರು ಖಾಲಿ ಕೊಡ ಹಾಗೂ ಬಿತ್ತಿ ಪತ್ರಗಳನ್ನು ಹಿಡಿದುಕೊಂಡು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿಯವರು, ತಮಿಳುನಾಡು ರಾಜ್ಯಕ್ಕೆ ನೀರು ಹರಿಸಿದ ರಾಜ್ಯ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆಂದು ಹೇಳಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಿಮಗೆ ಯೋಗ್ಯತೆ ಇದ್ದರೆ ಸಮಸ್ಯೆ ಪರಿಹಾರ ಮಾಡಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಎಲ್ಲರೂ ಸೇರಿ ನಾವು ಬೆಂಗಳೂರಿನಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕು ಎಂದು ದೇವೇಗೌಡರು ಕೂಡಾ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರು ತಮಿಳುನಾಡು ಏಜೆಂಟರಂತೆ ವರ್ತನೆ ಖಂಡನೀಯ ಎಂದು ಆಕ್ರೋಶ ಹೊರ ಹಾಕಿದರು.
ಮಾಜಿ ವಿಧಾನಪರಿಷತ್ ಸದಸ್ಯ ಅಶ್ವತ್ಥ್ ನಾರಾಯಣ್ ಅವರು ಮಾತನಾಡಿ, ಕಾವೇರಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ರೈತರಿಗೆ ದ್ರೋಹ ಬಗೆದಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ತರುವ ವಿಚಾರವಾಗಿ ಕೇಂದ್ರ ಬಿಜೆಪಿ ಮೇಲೆ ಏಕೆ ಗೂಬೆ ಕೂರಿಸುತ್ತೀರಾ? ಕಡಲ ಜಾರಿಗೆ ತನ್ನಿ. ಡಿಕೆಶಿ ಒಳ ಒಪ್ಪಂದದಿಂದ ರಾಜ್ಯದ ಜನರಿಗೆ ಮೋಸ ಆಗ್ತಿದೆ ಎಂದು ಕಿಡಿಕಾರಿದರು.
ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಖಜಾನೆ ಖಾಲಿ ಮಾಡಿದರು. ರಾಜಕೀಯ ಹಿತ ಕಾಪಾಡಲು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಕಾವೇರಿ ನಮ್ಮ ನೀರು ಎಂದು ಪಾದಯಾತ್ರೆ ಮಾಡಿದ್ದರು. ಆದರೆ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಸರ್ಕಾರ. ರಾಜ್ಯದಲ್ಲಿ ಬೇಜವಾಬ್ದಾರಿ ಸರ್ಕಾರ ಇದೆ.4 ಲಕ್ಷ ಹೆಕ್ಟೇರ್ ಅನಧಿಕೃತವಾಗಿ ಬೆಳೆಯನ್ನು ತಮಿಳುನಾಡು ಬೆಳೆದಿದೆ. ಇದನ್ನು ಸರ್ಕಾರ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿಲ್ಲ. ಇಂಡಿಯಾ ಪಾಟ್ನರ್ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆಯೂ ಸರ್ಕಾರ ಪರಿಣಾಮಕಾರಿ ವಾದ ಮಂಡನೆ ಮಾಡಿಲ್ಲ. ಇದರ ಪರಿಣಾಮವಾಗಿ ಹೀಗಾಗಿದೆ. ನೀರಿಗಾಗಿ ಜನ ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ಕೂಡಲೇ ತಮಿಳುನಾಡಿಗೆ ಹರಿಸುವ ನೀರನ್ನು ನಿಲ್ಲಿಸಬೇಕು ಹಾಗೂ ಸುಪ್ರೀಂ ಕೋರ್ಟ್ ಗೆ ವಸ್ತು ಸ್ಥಿತಿ ಮನವರಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಸದ ಪಿ.ಸಿ ಮೋಹನ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ ಹಿತ ಕಾಪಾಡುವಲ್ಲಿ ವಿಫಲವಾದ. ನೀರು ಬಿಟ್ಟ ಬಳಿಕ ಸರ್ವ ಪಕ್ಷದ ಸಭೆಯನ್ನು ಕರೆಯಲಾಗಿದೆ. ಇಂಡಿಯಾ ಒಕ್ಕೂಟದ ಹಿತವನ್ನು ಕಾಪಾಡುವ ಸಲುವಾಗಿ ಕರ್ನಾಟಕದ ಹಿತ ಬಲಿಕೊಡಲಾಗಿದೆ ಎಂದು ಹೇಳಿದರು.
ಪ್ರತಿಭಟನೆ ವೇಳೆ ತಮಿಳುನಾಡು ಸಿಎಂ ಸ್ಟಾಲಿನ್ ಹಾಗೂ ಕರ್ನಾಟಕ ಸಿಎಂ ಸಿದ್ದರಾಮಯ್ಯ ಜೊತೆಗಿರುವ ಫೋಟೋ ಪ್ರದರ್ಶನ ಮಾಡಲಾಯಿತು. ಅಲ್ಲದೆ ಡಿಸಿಎಂ ಡಿಕೆಶಿ ಹಾಗೂ ಸ್ಟಾಲಿನ್ ಜೊತೆಗಿರುವ ಫೋಟೋ ಕೂಡಾ ಪ್ರದರ್ಶನ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ