ಸಿದ್ದರಾಮಯ್ಯ ಬಜೆಟ್‌ ಟೀಕಿಸಿದ ಮಾಜಿ ಸಿಎಂಗಳು….!

ಬೆಂಗಳೂರು: 

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2024-25ನೇ ಸಾಲಿಗೆ 3,71, 383 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.

   ‘ಸಿದ್ದರಾಮಯ್ಯ ಅವರು ಕಳಪೆ ಬಜೆಟ್​ ಮಂಡಿಸಿದ್ದಾರೆ. ನನ್ನ ಜೀವಮಾನದಲ್ಲೇ ಇಂತಹ ಕಳಪೆ ಬಜೆಟ್​ ನೋಡಿಲ್ಲ. ಹದಿನಾಲ್ಕು ಬಜೆಟ್​ಗಳನ್ನು ಮಂಡಿಸಿರುವ ಸಿದ್ದರಾಮಯ್ಯರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ ಎಂದು ಯಡಿಯೂರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಈ ಬಾರಿ ಬಜೆಟ್​ನ ಬಹುತೇಕ ಅಂಶ ಕೇಂದ್ರ ಸರ್ಕಾರವನ್ನು ದೂರಲು ಮೀಸಲಿಡಲಾಗಿದೆ. ದೆಹಲಿ ಪ್ರತಿಭಟನೆಯ ಮುಂದುವರೆದ ಭಾಗವಾಗಿರುವ ಈ ಆಯವ್ಯಯ ಮಾಡಲಾಗಿದೆ. ವಾಸ್ತವಿಕ ಅಂಕಿ ಸಂಖ್ಯೆ ನೀಡದೇ ಕಾಲ್ಪನಿಕ ಅಂಕಿ ಸಂಖ್ಯೆ ನೀಡಿದ್ದು, ಈ ಬಜೆಟ್ ರಾಜ್ಯದ ಜನರಿಗೆ ಮಾಡಿರುವ ಮೋಸದಂತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬಜೆಟ್ ನಲ್ಲಿ ಜಲಸಂಪನ್ಮೂಲ ಖಾತೆಗೆ ಯಾವುದೇ ಅನುದಾನ ನೀಡದೇ, ಡಿ.ಕೆ. ಶಿವಕುಮಾರ್ ಅವರಿಗೂ ಮೋಸ ಮಾಡಲಾಗಿದೆ. ಅವರು ಮೇಕೆ ದಾಟು ಪಾದಯಾತ್ರೆ ಮಾಡಿದ್ದೇ ಸಾಧನೆಯಾಗಿದೆ. ಅದರಂತೆ ಕೃಷ್ಣಾ ಕೊಳ್ಳ, ಮಹದಾಯಿ, ನವಿಲೆ ಯೋಜನೆಗೆ ಅನುದಾನ ನಿಗದಿಪಡಿಸಿಲ್ಲ. ಬೆಂಗಳೂರು ಅಭಿವೃದ್ಧಿಗೆ ಯಾವುದೇ ಅನುದಾನ ನಿಗದಿಯಿಲ್ಲ. ಏಳನೇ ವೇತನ ಆಯೋಗದ ಅನುಷ್ಠಾನಕ್ಕೆ ಸ್ಪಷ್ಟ ಘೋಷಣೆಯಿಲ್ಲ. ಓಪಿಎಸ್ ಪುನರ್ ಜಾರಿ ಬಗ್ಗೆ ಚಕಾರ ಎತ್ತಿಲ್ಲ.

    ವರುಣ ಕ್ಷೇತ್ರಕ್ಕೆ ಎರಡು ಸಾವಿರ ಕೋಟಿ ಕೊಟ್ಟು, ಬೇರೆ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ. 27,353 ಸಾವಿರ ಕೋಟಿ ರಾಜಸ್ವ ಕೊರತೆ ಬಜೆಟ್ ಮಂಡಿಸಿರುವುದು, ರಾಜ್ಯ ಆರ್ಥಿಕ ದಿವಾಳಿಯಾಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ. ಕಾಂಗ್ರೆಸ್ ಆಡಳಿತದಿಂದ ರಾಜ್ಯ ದಿವಾಳಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಣಕಾಸು ಪರಿಸ್ಥಿತಿಯನ್ನು ದಿವಾಳಿಯಂಚಿಗೆ ತಂದು ನಿಲ್ಲಿಸುವ ಅತ್ಯಂತ ಕಳಪೆ ಬಜೆಟ್ ಇದಾಗಿದೆ ಎಂದು ಮಾಜಿ ಸಿಎಂ ಹೇಳಿದ್ದಾರೆ.

   ಇಂದು ವಿಧಾನಸೌಧದಲ್ಲಿ ಬಜೆಟ್​ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ‘ದೇಶದಲ್ಲಿ ಅಮೃತ ಕಾಲದ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಸಿದ್ದರಾಮಯ್ಯ ಬಜೆಟ್ ನೋಡಿದ್ರೆ ಅಮೃತ ಅಲ್ಲ, ವಿಷ, ವಿನಾಶ ಕಾಲ ಎನ್ನುವುದು ತಿಳಿಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ರಾಜ್ಯಪಾಲರಿಂದ ಹಲವಾರು ಸುಳ್ಳುಗಳನ್ನು ಹೇಳಿಸಿದ್ದಾರೆ. ಬಜೆಟ್ ಕೂಡ ಸುಳ್ಳಿನಿಂದ ಕೂಡಿದೆ. ನಿನ್ನೆ ಪರಿಷತ್ತಿನಲ್ಲಿ ಸಿದ್ದರಾಮಯ್ಯ ಅವರು ನಾನು ಹೇಳೋದೆಲ್ಲಾ ಸತ್ಯ ಅಂದಿದ್ದಾರೆ. ನೂರು ಬಾರಿ ಸುಳ್ಳು ಹೇಳಿ, ಸತ್ಯ ಮಾಡುತ್ತೇವೆ ಅಂತಾರೆ, ಹಾಗೆಯೇ ಮಾಡಿದ್ದಾರೆ. ಪ್ರತಿ ವಿಷಯದಲ್ಲೂ ಕೇಂದ್ರದ ಮುಂದೆ ಹೋಗುತ್ತೇವೆ ಎನ್ನುತ್ತಾರೆ. ಇದೀಗ ಅಭಿವೃದ್ಧಿ ವಿಚಾರಕ್ಕೂ ಕೇಂದ್ರದ ಮುಂದೆ ಹೋಗ್ತವೇ ಎಂದಿದ್ದಾರೆ. ಕಳೆದ ಮೂರು ವರ್ಷದ ಬಿಜೆಪಿ ಆಡಳಿತದಲ್ಲಿ ಯಾವ ಯೋಜನೆ ಹಾಕಿದ್ದರೋ ಅದೇ ಯೋಜನೆಯನ್ನೇ ಉಲ್ಲೇಖ ಮಾಡಿದ್ದಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link