ಇಸ್ಲಮಾಬಾದ್:
ಅಮೆರಿಕ ಮತ್ತು ವೆಸ್ಟ್ಇಂಡೀಸ್ ಜಂಟಿಯಾಗಿ ಆಯೋಜಿಸಿರುವ ಟಿ20 ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ಕ್ರಿಕೆಟ್ ತಂಡವು ಹೊರಬಿದ್ದಿರುವುದು ಎಲ್ಲರಿಗೂ ತಿಳಿದಿದೆ. ತಮ್ಮ ಭಯಾನಕ ಪ್ರದರ್ಶನದಿಂದ ಅಭಿಮಾನಿಗಳನ್ನು ಪಾಕ್ ತಂಡ ನಿರಾಶೆಗೊಳಿಸಿದೆ. ಸೆಮಿಫೈನಲ್ ಆದರೂ ತಲುಪಬಹುದು ಎಂದು ಭಾವಿಸಿದ್ದರು.
ಆದರೆ, ಗ್ರೂಪ್ ಹಂತದಲ್ಲಿ ಪಾಕ್ ತಂಡ ಮನೆಗೆ ಮರಳಿದೆ. ಕಳೆದ ಏಕದಿನ ವಿಶ್ವಕಪ್‌ನಲ್ಲಿಯೂ ಬಾಬರ್ ಅಜಾಮ್ ತಂಡ ಇದೇ ರೀತಿ ಲೀಗ್ ಹಂತದಲ್ಲಿ ಮನೆಗೆ ಮರಳಿತ್ತು.
ಟೀಮ್ ಇಂಡಿಯಾ ಹಾಗೂ ಕ್ರಿಕೆಟ್ ಶಿಶು ಯುಎಸ್ಎ ವಿರುದ್ಧ ಸೋತು ತೀವ್ರ ಮುಖಭಂಗದಿಂದ ಪಾಕ್ ತಂಡ ಟೂರ್ನಿಯಿಂದ ನಿರ್ಗಮಿಸಿದೆ. ಕಳಪೆ ಬೌಲಿಂಗ್ ಮತ್ತು ಬ್ಯಾಟಿಂಗ್‌ನಿಂದಾಗಿ ಅಭಿಮಾನಿಗಳು ತೀವ್ರ ನಿರಾಸೆಗೊಂಡರು. ಒಂದು ಕಾಲದಲ್ಲಿ ತನ್ನ ಅತ್ಯುತ್ತಮ ವೇಗದ ಬೌಲಿಂಗ್ ಮತ್ತು ಸ್ಥಿರ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ತಂಡ ಹೆಸರನ್ನು ಪಡೆದಿದ್ದ ಪಾಕಿಸ್ತಾನ ಇದೀಗ ಹೀನಾಯ ಸ್ಥಿತಿಗೆ ಬಂದು ತಲುಪಿದೆ. ಹೀಗಾಗಿ ಅಭಿಮಾನಿಗಳ ಜೊತೆಗೆ ಮಾಜಿ ಕ್ರಿಕೆಟಿಗರು ಸಹ ಬಾಬರ್ ಸೇನೆಯನ್ನು ಟ್ರೋಲ್ ಮಾಡುತ್ತಿದ್ದಾರೆ.
ವಿಶ್ವಕಪ್‌ನಿಂದ ನಿರ್ಗಮಿಸಿದ ಪಾಕಿಸ್ತಾನ ತಂಡದ ವಿರುದ್ಧ ತಾಯ್ನಾಡಿನಲ್ಲಿ ಕೋಪದ ಜ್ವಾಲೆ ಹೊತ್ತಿ ಉರಿಯುತ್ತಿದೆ. ತಂಡದ ಆಟಗಾರರು ದೇಶ ಪ್ರವೇಶಿಸಿದರೆ ಟೀಕೆಗಳ ಸುರಿಮಳೆಯಾಗಲಿದೆ. ಇದಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಆದರೆ, ತಂಡದ ನಾಯಕ ಬಾಬರ್ ಆಜಮ್ ಸೇರಿದಂತೆ ಅಜಮ್ ಖಾನ್, ಶಾದಾಬ್ ಖಾನ್, ಮೊಹಮ್ಮದ್ ಅಮೀರ್, ಹ್ಯಾರಿಸ್ ರೌಫ್, ಇಮಾದ್ ವಾಸಿಂ ಮತ್ತು ಇತರರು ಮನೆಗೆ ಬರುವ ಬದಲು ಯುಕೆಗೆ ಹೋಗಿದ್ದಾರೆ ಎಂಬುದು ಇದೀಗ ಚರ್ಚೆಯ ವಿಷಯವಾಗಿದೆ.
ಸೋಲಿನಿಂದ ಕಂಗೆಟ್ಟಿರುವ ಕ್ರಿಕೆಟಿಗರು ಪಾಕಿಸ್ತಾನಕ್ಕೆ ಹೋಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಕುಟುಂಬ ಸಮೇತ ಲಂಡನ್ನಲ್ಲಿ ಹಾಲಿಡೇ ಟ್ರಿಪ್ ಎಂಜಾಯ್ ಮಾಡುತ್ತಿರುವ ಸುದ್ದಿ ಬಂದಿದೆ. ಇನ್ನು ಕೆಲವು ಆಟಗಾರರು ಅಮೆರಿಕದಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಮಾಜಿ ಕ್ರಿಕೆಟಿಗರು ಮುಜುಗರಕ್ಕೆ ಒಳಗಾಗಿದ್ದಾರೆ. ತಂಡದಲ್ಲಿರುವ 17 ಮಂದಿ 60 ಕೊಠಡಿಗಳನ್ನು ಬುಕ್ ಮಾಡಿದ್ದಾರೆ. ಅವರ ಪಕ್ಕದಲ್ಲಿ ಪತ್ನಿಯರಿದ್ದರೆ ಇನ್ನೇನು ಕ್ರಿಕೆಟ್ ಆಡುತ್ತಾರೆ ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಅತೀಕ್ ಉಜ್ ಜಮಾನ್ ಕಟುವಾದ ಕಾಮೆಂಟ್ ಮಾಡಿದ್ದಾರೆ.
ಅವರು ಸಾಕಷ್ಟು ನಾಟಕ ಮಾಡುತ್ತಿದ್ದಾರೆ. ನಾವು ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ತಂಡದ ಜೊತೆ ಒಬ್ಬ ಕೋಚ್ ಮತ್ತು ಮ್ಯಾನೇಜರ್ ಇದ್ದರು. ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಆದರೆ ಈಗ ತಂಡದಲ್ಲಿರುವ 17 ಆಟಗಾರರ ಜೊತೆಗೆ 17 ಅಧಿಕಾರಿಗಳು ಇದ್ದಾರೆ. ಅವರೆಲ್ಲರಿಗೂ 60 ಕೊಠಡಿಗಳನ್ನು ಕಾಯ್ದಿರಿಸಬೇಕು. ಇದು ನಿಮಗೆ ತಮಾಷೆಯೇ? ನೀವು ಕ್ರಿಕೆಟ್ ಆಡಲು ಅಮೆರಿಕಕ್ಕೆ ಹೋಗಿದ್ದೀರಾ? ಅಥವಾ ರಜೆಯ ಆನಂದಕ್ಕಾಗಿ ಹೋಗಿದ್ದೀರಾ? ವಿಶ್ವಕಪ್‌ನಂತಹ ಮೆಗಾ ಟೂರ್ನಮೆಂಟ್‌ಗಳಿಗೆ ನಿಮ್ಮ ಕುಟುಂಬವನ್ನು ನಿಮ್ಮೊಂದಿಗೆ ಕರೆದೊಯ್ಯುವ ಅಗತ್ಯವೇನು? ಪಂದ್ಯಗಳ ವೇಳೆ ಪತ್ನಿಯರ ಜೊತೆ ಪ್ರವಾಸಕ್ಕೆ ಹೋಗುವುದು ನಿಮಗೆಲ್ಲ ಅಭ್ಯಾಸವಾಗಿ ಹೋಗಿದೆ. ನೀವು ಹೆಂಡತಿ ಮತ್ತು ಮಕ್ಕಳೊಂದಿಗೆ ಇದ್ದರೆ ಆಟದ ಮೇಲೆ ಹೇಗೆ ಗಮನ ಹರಿಸಬಹುದು? ಈ ರೀತಿಯ ಸಂಸ್ಕೃತಿ ಪಾಕ್ ತಂಡದಲ್ಲಿ ಇರಲಿಲ್ಲ. ಇದು ಕೆಟ್ಟದ್ದು. ಶಿಸ್ತಿನ ಕೊರತೆಯಿದೆ ಎಂದು ಅತೀಕ್ ಉಜ್ ಜಮಾನ್ ಟೀಕಾ ಪ್ರಹಾರ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
