ಮಂಡ್ಯ:
ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಗೆ ಸಂಸದೆ ಸುಮಲತಾ ಬೆಂಬಲ ಸೂಚಿಸಿದ ಬೆನ್ನಲ್ಲೇ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮಾಜಿ ಸಂಸದೆ, ನಟಿ ರಮ್ಯಾ ಪ್ರಚಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಇದರಂತೆ ಸಂಸದರಾಗಿದ್ದ 6 ತಿಂಗಳಲ್ಲೇ ಜನಮನ ಗೆದ್ದಿದ್ದ ರಮ್ಯಾ ಅವರನ್ನು ಪ್ರಚಾರಕ್ಕೆ ಕರೆಸಿ ಮತದಾರರನ್ನ ಸೆಳೆಯಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿದೆ.
ರಮ್ಯಾ ಜೊತೆ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಈಗಾಗಲೇ ಮಾತುಕತೆ ನಡೆಸಿದ್ದು, ಮಂಡ್ಯ ಕ್ಷೇತ್ರದ ಕ್ಯಾಂಪೇನ್‍ಗೆ ಬರಲು ಅವರು ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ವಾರ ಅಭ್ಯರ್ಥಿ ಜೊತೆ ರೋಡ್ ಶೋ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಒಕ್ಕಲಿಗರ ಭದ್ರಕೋಟೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಎಂಟ್ರಿ ಕೊಡಲಿದ್ದಾರೆ. ಏಪ್ರಿಲ್ 17 ಅಥವಾ 20 ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಹೆಚ್‍ಡಿಕೆ ವಿರುದ್ಧ ತಂತ್ರ ಹೆಣೆದು ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಇದರ ನಡುವೆ ಸಿಎಂ ಸಿದ್ದರಾಮಯ್ಯರಿಂದ ಒಂದು ದಿನ, ಮಂಡ್ಯ ಲೋಕಾಸಭಾ ಕ್ಷೇತ್ರದ ಕೆ.ಆರ್ ನಗರ, ಕೆ.ಆರ್ ಪೇಟೆಯಲ್ಲಿ ಮತಯಾಚನೆ ನಡೆಯಲಿದೆ. ಇನ್ನೊಂದು ದಿನ ಡಿಸಿಎಂ ಡಿ.ಕೆ ಶಿವಕುಮಾರ್ ಮಂಡ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂಲಕ ಮಂಡ್ಯವನ್ನ ಸಾಕಷ್ಟು ಪ್ರತಿಷ್ಠೆಯ ಕ್ಷೇತ್ರವಾಗಿ ಕಾಂಗ್ರೆಸ್ ತೆಗೆದುಕೊಂಡಿದೆ.
ಮತ್ತೊಂದೆಡೆ ಮೈತ್ರಿ ಬಲ ಹೆಚ್ಚಿಸಿರುವ ಸಂಸದೆ ಸುಮಲತಾ, ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಪರ ಪ್ರಚಾರಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ