ಬಿಡಿಎ ಅಧಿಕಾರಿಗಳ ನಿರ್ಲಕ್ಷ್ಯ : 18 ವರ್ಷದಿಂದ ನಿವೇಶನಕ್ಕಾಗಿ ಕಾಯುತ್ತಿರುವ ಮಾಜಿ ಪೊಲೀಸ್‌

ಬೆಂಗಳೂರು:

     2006ರ ಜೂನ್‌ನಲ್ಲಿ ಗುಪ್ತಚರ ಇಲಾಖೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಂ.ಎನ್ ರಾಜಣ್ಣ ಅವರಿಗೆ ಮಾಜಿ ಸೈನಿಕ ಕೋಟಾದಡಿ ಬಿಡಿಎ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದರೆ 18 ವರ್ಷ ಕಳೆದರೂ ಹಂಚಿಕೆಯಾಗಿದ್ದ ನಿವೇಶನಕ್ಕಾಗಿ ಮಾಜಿ ಪೊಲೀಸ್ ಅಧಿಕಾರಿ ಕಾಯುತ್ತಿದ್ದಾರೆ.

    ಅರ್ಕಾವತಿ 18ನೇ ಬ್ಲಾಕ್‌ನಲ್ಲಿರುವ ಭೈರತಿಖಾನೆಯಲ್ಲಿ ಅವರ 40×60 ಚದರ ಅಡಿ ನಿವೇಶನವನ್ನು 2024ರ ಮೇನಲ್ಲಿ ಹಸ್ತಾಂತರಿಸಬೇಕಾಗಿದೆ. ಆದರೆ ರಾಜಣ್ಣ ಅವರಿಗೆ ಈಗ 80 ವರ್ಷ ವಯಸ್ಸಾಗಿದ್ದು ತಮ್ಮ ನ್ಯಾಯಸಮ್ಮತವಾದ ಹಸ್ತಾಂತರಕ್ಕಾಗಿ ಬಿಡಿಎ ಕಚೇರಿಗೆ ಆಗಾಗ್ಗೆ ಅಲೆಯುತ್ತಿದ್ದಾರೆ. ತಮ್ಮ ಸೇವೆಗಾಗಿ ಭಾರತದ ರಾಷ್ಟ್ರಪತಿ ಚಿನ್ನದ ಪದಕವನ್ನು ಪಡೆದುಕೊಂಡಿರುವ ದಕ್ಷ ಅಧಿಕಾರಿ, ಕಳೆದ ಒಂದು ದಶಕದಿಂದ ಅಸಂಖ್ಯಾತ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ನಿವೇಶನಕ್ಕಾಗಿ ಮಾನವಿ ಮಾಡಿಕೊಂಡಿದ್ದಾರೆ.

     ನನಗೆ 2006ರ ಜೂನ್ 24ರಂದು ಅರ್ಕಾವತಿ ಬಡಾವಣೆಯಲ್ಲಿನ ಸೈಟ್ ನಂ. 140 ಅನ್ನು ಮಂಜೂರು ಮಾಡಲಾಗಿತ್ತು. ಅದರ ಸಂಪೂರ್ಣ ಮೊತ್ತವನ್ನು 4.53 ಲಕ್ಷ ರೂಪಾಯಿಯನ್ನು ಪಾವತಿಸಿದ್ದೆ. ಇನ್ನು ನನ್ನ ನಿವೇಶನದ ಅಳತೆ 40×60 ಚದರ ಅಡಿ ಮೀರಿರುವುದರಿಂದ ಹೆಚ್ಚುವರಿಯಾಗಿ 5.71 ಲಕ್ಷ ರೂ.ಗಳನ್ನು ಪಾವತಿಸಬೇಕು ಎಂದು ಬಿಡಿಎಯಿಂದ 2014ರ ಅಕ್ಟೋಬರ್ 23ರಂದು ನನಗೆ ಪತ್ರ ಬಂದಿತ್ತು. ಇದನ್ನು ನೋಡಿ ನಾನು ಆಘಾತಕ್ಕೊಳಗಾದೆ. ಆದರೆ ಅದಕ್ಕಾಗಿ ಸಾಲ ಮಾಡಿ ಹಣ ಪಾವತಿಸಿದೆ.

    ನಂತರ ಬಿಡಿಎ ನನಗೆ ಲೀಸ್-ಕಮ್-ಸೇಲ್ ಡೀಡ್ (ತಾತ್ಕಾಲಿಕ ಮಾಲೀಕತ್ವ ಪ್ರಮಾಣಪತ್ರ) ಅನ್ನು 2014ರ ಡಿಸೆಂಬರ್ 19ರಂದು ನೀಡಿತು. ನಾನು ಖಾತಾ, ಸ್ವಾಧೀನ ಪ್ರಮಾಣಪತ್ರ ಮತ್ತು ವಿವಿಧ ವಿಭಾಗಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಸಹ ಪಡೆದುಕೊಂಡಿದ್ದೇನೆ. ಆದರೆ ನನಗೆ ಇನ್ನೂ ಸಂಪೂರ್ಣ ಮಾರಾಟದ ಪ್ರಮಾಣಪತ್ರವನ್ನು ನೀಡಲಾಗಿಲ್ಲ. ನಾನು 2022ರವರೆಗೆ ವಾರ್ಷಿಕವಾಗಿ 5,830 ರೂಪಾಯಿ ಆಸ್ತಿ ತೆರಿಗೆಯನ್ನು ಪಾವತಿಸುತ್ತಾ ಬಂದಿದ್ದೇನೆ. ಆ ಸೈಟ್ ನ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 85 ಲಕ್ಷ ರೂಪಾಯಿ ಆಗಿದೆ. 

    2018ರಲ್ಲಿ ನಾನು ಸಂಪೂರ್ಣ ಮಾರಾಟ ಪತ್ರಕ್ಕಾಗಿ ಬಿಡಿಎ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಬೆಂಗಳೂರು ಉತ್ತರದ ಅಧಿಕಾರಿಗಳು ಬೇರೆ ಯಾವುದೇ ಬಿಡಿಎ ಲೇಔಟ್‌ನಲ್ಲಿ ಪರ್ಯಾಯ ಸೈಟ್ ಅನ್ನು ಆಯ್ಕೆ ಮಾಡಿಕೊಳ್ಳುವಂತೆ ನನಗೆ ತಿಳಿಸಿದ್ದರು. ನಾನು ಒಪ್ಪಲಿಲ್ಲ. ಅಲ್ಲದೆ ನನ್ನನ್ನು ದಾರಿ ತಪ್ಪಿಸಿದ್ದಕ್ಕಾಗಿ ಅಂದಿನ ಕಮಿಷನರ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರು ಎಂದು ರಾಜಣ್ಣ ಹೇಳಿದರು.

     ನಂತರ, ಅರ್ಕಾವತಿ ಲೇಔಟ್ ಅನ್ನು ಬದಲಾಯಿಸಲಾಯಿತು. 2018ರಲ್ಲಿ ಹೊಸ ಸಾಮಾನ್ಯ ಆಯಾಮದ ವರದಿಯ ಪ್ರಕಾರ, ಅರ್ಕಾವತಿಯಲ್ಲಿರುವ ಸೈಟ್ ಸಂಖ್ಯೆ 132 ಅನ್ನು ನನ್ನ ಆಸ್ತಿ ಎಂದು ಪಟ್ಟಿ ಮಾಡಲಾಗಿದೆ. ಆದರೆ ಅದರ ವಿಸ್ತೀರ್ಣ ಕಡಿಮೆ ಇದೆ. ಅದು ಕೇವಲ 40×57 ಚದರ ಅಡಿ ಆಗಿದೆ. ಸರಿ ಅದನ್ನು ನಾನು ಒಪ್ಪಿಕೊಂಡೆ. ನಂತರ ನಗರ ಯೋಜನಾ ಇಲಾಖೆಗೆ ಅನುಮೋದನೆಯ ಕಡತವನ್ನು ಕಳುಹಿಸಲಾಗಿತ್ತು. ಅಲ್ಲಿ ಮೂರು ತಿಂಗಳು ವಿಳಂಬವಾಯಿತು.

      ಈ ಮಧ್ಯೆ ಅರ್ಕಾವತಿ ಲೇಔಟ್ ಮಂಜೂರಾತಿದಾರರ ಸಮಸ್ಯೆಗಳ ಪರಿಹಾರಕ್ಕಾಗಿ ಹೈಕೋರ್ಟ್ ನ್ಯಾಯಮೂರ್ತಿ ಕೇಶವ ನಾರಾಯಣ ಸಮಿತಿಯನ್ನು ರಚಿಸಿತ್ತು. ನಾನು ಈ ಸಮಿತಿಯನ್ನು ಸಂಪರ್ಕಿಸಿದೆ. ಸಮಿತಿ 2023ರ ಅಕ್ಟೋಬರ್ 20ರಂದು ನನಗೆ ಸೈಟ್ ನಂ.105 ಅನ್ನು ಮಂಜೂರು ಮಾಡುವ ಆದೇಶವನ್ನು ನೀಡಿದ್ದು 15 ದಿನದೊಳಗೆ ನನಗೆ ಹಸ್ತಾಂತರಿಸುವಂತೆ ಬಿಡಿಎಗೆ ಸೂಚಿಸಿತ್ತು. ಆದರೆ ಆರು ತಿಂಗಳು ಕಳೆದರೂ ಇನ್ನು ಹಸ್ತಾಂತರ ಮಾಡಿಲ್ಲ. ಈ ಬಗ್ಗೆ ಪರಿಶೀಲಿಸುವುದಾಗಿ ಬಿಡಿಎ ಆಯುಕ್ತ ಎನ್.ಜಯರಾಮ್ ತಿಳಿಸಿದ್ದಾರೆ ಎಂದು ರಾಜಣ್ಣ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap