ತುಮಕೂರು:
ತುಮಕೂರು ಮತ್ತು ರಾಮನಗರ ಜಿಲ್ಲೆಯ ನಡುವೆ ಸೃಷ್ಠಿಯಾಗಿರುವ ಹೇಮಾವತಿ ಲಿಂಕಿಂಗ್ ಕೆನಾಲ್ ಯೋಜನೆಯ ವಿವಾದಕ್ಕೆ ಈಗ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಹೇಮಾವತಿ ಎಕ್ಸ್ ಪ್ರೆಸ್ ಲಿಂಕಿಂಗ್ ಕೆನಾಲ್ ಯೋಜನೆಯಿಂದ ಜಿಲ್ಲೆಗೆ ಅನ್ಯಾಯವಾಗುತ್ತದೆ. ಈ ಯೋಜನೆ ರದ್ದು ಮಾಡಬೇಕೆನ್ನುವುದು ತುಮಕೂರು ಜಿಲ್ಲೆಯ ವಾದ. ಇಲ್ಲಿಯ ನಾಯಕರು, ಹೋರಾಟಗಾರರು ಪಕ್ಷಾತೀತವಾಗಿ ವಿರೋಧ ಮಾಡಿದ್ದರು. ಹೋರಾಟಕ್ಕೆ ಧುಮುಕಿದ್ದರು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿ ಹೈಡ್ರಾಮ ನಡೆದಿತ್ತು. ಇತ್ತ ರಾಮನಗರ ಜಿಲ್ಲೆಯ ಮಾಗಡಿ ಭಾಗಕ್ಕೆ ಕುಡಿಯು ನೀರು ಕೊಡುವುದು ಇದರ ಉದ್ದೇಶ. ಇದಕ್ಕೆ ತುಮಕೂರಿನವರು ವಿರೋಧಿಸುತ್ತಿದ್ದಾರೆ ಎನ್ನುವುದು ಅವರ ವಾದ.
ಲೋಕಸಭಾ ಚುನಾವಣೆಗೂ ಮುನ್ನವೇ ಲಿಂಕ್ ಕೆನಾಲ್ ಯೋಜನೆಗೆ ಚಾಲನೆ ಸಿಕ್ಕಿತ್ತು. ಕಾಮಗಾರಿಯೂ ನಡೆಯುತ್ತಿತ್ತು. ಚುನಾವಣೆ ಮುಗಿದ ಬಳಿಕವೇ ಹೋರಾಟಕ್ಕೆ ಧುಮುಕಿದ್ದರು ತುಮಕೂರು ಜನ. ಹೀಗಾಗಿ ಈ ವಿವಾದ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಈಗ ಈ ಯೋಜನೆಗೆ ತಾಂತ್ರಿಕ ಸಮಿತಿ ರಚನೆ ಮಾಡಿ ವರದಿ ಬಂದ ನಂತರ ಯೋಜನೆ ಆರಂಭಿಸುವ ಅಥವಾ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳುವ ನಿರ್ಣಯ ಕೈಗೊಳ್ಳಲಾಗಿದ್ದು, ಅಲ್ಲಿವರೆಗೂ ಯೋಜನೆ ಕಾಮಗಾರಿ ರದ್ದು ಮಾಡುವಂತೆಯೂ ತೀರ್ಮಾನ ತೆಗೆದುಕೊಂಡಿದ್ದಾರೆ ನಾಯಕರು ಎನ್ನುವ ಮಾಹಿತಿ ಲಭ್ಯವಾಗಿದೆ.
ಹೌದು, ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆ ಮುಖಾಂತರ ಕುಣಿಗಲ್ ಮತ್ತು ಮಾಗಡಿ ಭಾಗಕ್ಕೆ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕಾಗಿ ಶ್ರೀರಂಗ ಕೆರೆ ತುಂಬುವ ಯೋಜನೆಗೆ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಪೈಪ್ ಲೈನ್ ಕಾಮಗಾರಿ ಮಾಡುವ ಕುರಿತು ಟೆಕ್ನಿಕಲ್ ಕಮಿಟಿ ರಚನೆ ಮಾಡಿ ಕಮಟಿಯ ವರದಿ ನಂತರ ಕಾಮಗಾರಿ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಬೆಂಗಳೂರಿನ ವಿಕಾಸ ಸೌಧದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಗುರುವಾರ ಸಂಜೆ ತುಮಕೂರು ಜಿಲ್ಲಾ ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಹೇಮಾವತಿ ಲಿಂಕಿಂಗ್ ಕೆನಾಲ್ ಕಾಮಗಾರಿಯಿಂದ ತುಮಕೂರು ಜಿಲ್ಲೆಗೆ ಅನ್ಯಾಯವಾಗುತ್ತದೆ ಎಂದು ಶಾಸಕರು ವಿರೋಧ ವ್ಯಕ್ತಪಡಿಸಿ ಕಾಮಗಾರಿ ರದ್ಧು ಮಾಡಬೇಕೆಂದು ಒತ್ತಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ಕುಣಿಗಲ್ ಶಾಸಕ ಡಾ ಕೆ ರಂಗನಾಥ್ ಕುಣಿಗಲ್ ಗೆ ಮೂರು ಟಿಎಂಸಿ ನೀರು ಬರಬೇಕು. ಆದರೆ ನಮಗೆ ನಿಗದಿಯಾಗಿರುವ ಮೂರು ಟಿಎಂಸಿ ನೀರು ಇದುವರೆಗೂ ಬಂದಿಲ್ಲ. ಆದ್ದರಿಂದ ಕುಣಿಗಲ್ ಗೆ ಎಕ್ಸ್ ಪ್ರೆಸ್ ಕೆನಾಲ್ ಮೂಲಕ ನೀರು ಹರಿಸಬೇಕು ಎಂದು ಮನವಿ ಮಾಡಿದರು ಎನ್ನಲಾಗಿದೆ.
ಇದಕ್ಕೆ ಶಾಸಕರಾದ ಬಿ ಸುರೇಶ್ ಗೌಡ ಆಕ್ಷೇಪಣೆ ವ್ಯಕ್ತಪಡಿಸಿ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆಗಳಿವೆ ನಮಗೂ ನಿಗಧಿಯಾಗಿರುವಷ್ಟು ನೀರು ಬಂದಿಲ್ಲ. ನಮಗೂ ಪ್ರತ್ಯೇಕ ಎಕ್ಸ್ ಪ್ರೆಸ್ ಕೆನಾಲ್ ನಿರ್ಮಿಸಿ ನೀರು ಹರಿಸಿ ಎಂದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಯೋಜನೆಯಿಂದ ಜಿಲ್ಲೆಯ ನೀರಿಗೆ ಸಮಸ್ಯೆಯಾಗುತ್ತದೆ ಯೋಜನೆ ಸಾಧಕ ಬಾಧಕಗಳ ಕುರಿತು ನಿರ್ಣಯ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಎಂಟಿ ಕೃಷ್ಣಪ್ಪ, ಶಾಸಕರಾದ ಸಿ ಬಿ ಸುರೇಶ್ ಬಾಬು, ಕೆ.ಷಡಕ್ಷರಿ, ಎಸ್ ಆರ್ ಶ್ರೀನಿವಾಸ್ ಕೂಡ ಎಕ್ಸ್ ಪ್ರೆಸ್ ಕೆನಾಲ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ತುಮಕೂರು ಜಿಲ್ಲಾ ನಾಯಕರ ಅಭಿಪ್ರಾಯ ಆಲಿಸಿದ ಡಿಸಿಎಂ ಡಿಕೆ ಶಿವಕುಮಾರ್, ಕುಡಿಯುವ ನೀರು ಉದ್ದೇಶದಿಂದ ಶ್ರೀ ರಂಗ ಕೆರೆ ತುಂಬಿಸುವ ಯೋಜನೆ ಈ ಹಿಂದೆಯೇ ಆರಂಭವಾಗಿತ್ತು. ಆದರೆ ಈಗ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಈ ಬಗ್ಗೆ ಟೆಕ್ನಿಕಲ್ ಸಮಿತಿ ರಚನೆ ಮಾಡಿ ಅದರ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಪ್ರಸ್ತಾಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ, ಚಿದಾನಂದ್ಎಂ ಗೌಡ, ಶಾಸಕ ಹೆಚ್ ವಿ ವೆಂಕಟೇಶ್ ಸೇರಿದಂತೆ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ