ಬೆಂಗಳೂರು
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಮುಗಿದಿದೆ. ಎರಡನೇ ಹಂತದ ಮತದಾನಕ್ಕೆ ಸಿದ್ಧವಾಗುತ್ತಿದೆ. ಇದೇ ವೇಳೆ ದೇಶವೂ ಮೂರನೇ ಹಂತದ ಮತದಾನಕ್ಕೆ ತಯಾರಾಗುತ್ತಿದೆ. ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದರೆ, ಚುನಾವಣೆಯನ್ನು ಸುಸೂತ್ರವಾಗಿ ಮುಗಿಸಲು ಸರ್ಕಾರದ ಅಂಗ ಸಂಸ್ಥೆಗಳು ಸಕಲ ಪ್ರಯತ್ನದಲ್ಲಿವೆ.
ರಾಜಧಾನಿ ಬೆಂಗಳೂರು ರಾಜ್ಯದ ಪ್ರಮುಖ ಉದ್ಯೋಗ ನಗರವಾಗಿದ್ದು, ಜೀವನ ನಿರ್ವಹಣೆಗಾಗಿ ಬೇರೆ ಬೇರೆ ಭಾಗಗಳ ಜನರು ಇಲ್ಲಿ ನೆಲೆಸಿದ್ದಾರೆ. ಚುನಾವಣೆ ಸಮಯದಲ್ಲಿ ತಮ್ಮ ಊರುಗಳಿಗೆ ತೆರಳಿ ಮತ ಚಲಾಯಿಸಿ ವಾಪಸ್ ಆಗುತ್ತಾರೆ. ಆದರೆ, ಒಮ್ಮೆಲೆ ಅಷ್ಟೊಂದು ಜನ ಊರುಗಳಿಗೆ ತೆರಳುವ ಕಾರಣ ಬಸ್ಗಳ ಬೇಡಿಕೆ ಹೆಚ್ಚುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್ಗಳ ಸೇವೆ ನೀಡುತ್ತಿದೆ.
ಮೇ ಏಳರಂದು 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಈಗಾಗಲೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಈಗ ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಎಲ್ಲವೂ ಹೆಚ್ಚು ಕಡಿಮೆ ಉತ್ತರ ಕರ್ನಾಟಕದ ಭಾಗದಲ್ಲಿವೆ.
ಹೀಗಾಗಿಯೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ಮೂರು ದಿನಗಳ ಕಾಲ ವಿಶೇಷ ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ. ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಮತ್ತು ಇನ್ನಿತರ ಸ್ಥಳಗಳಿಗೆ ವಿಶೇಷ ಹೆಚ್ಚುವರಿ ಸಾರಿಗೆ ಸೇವೆ ನೀಡಲಿದೆ.
ಮೇ 7 ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿರುವ ಪ್ರಯುಕ್ತ ದಿನಾಂಕ: 03-05-2024 ರಿಂದ 06-05-2024 ವರೆಗೆ ವಿಶೇಷ ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ ನಡೆಸಲಿದೆ. ಬಸ್ ಟಿಕೆಟ್ ಬುಕಿಂಗ್ ಗಾಗಿ http://ksrtc.in ಗೆ ಭೇಟಿ ನೀಡಿ” ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಬೆಂಗಳೂರಿನಿಂದ ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಮತ್ತು ಇನ್ನಿತರ ಸ್ಥಳಗಳಿಗೆ ವಿಶೇಷ ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ ನಡೆಸಲಿದೆ. ಮುಂಗಡ ಆಸನ ಕಾಯ್ದಿರಿಸಿದರೆ ರಿಯಾಯಿತಿ ನೀಡಲಾಗುತ್ತದೆ. 4 ಅಥವಾ ಹೆಚ್ಚಿನ ಆಸನಗಳನ್ನು ಒಂದೇ ಸಲಕ್ಕೆ ಕಾಯ್ದಿರಿಸಿದರೆ ಶೇಕಡಾ 5 ರಷ್ಟು ರಿಯಾಯಿತಿ, ಹೋಗುವ ಹಾಗೂ ಬರುವ ಪ್ರಯಾಣಕ್ಕೆ ಒಟ್ಟಿಗೆ ಆಸನವನ್ನು ಕಾಯ್ದಿರಿಸಿದರೆ 10% ರಿಯಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ http://ksrtc.in ಗೆ ಭೇಟಿ ನೀಡಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ