ರೈತರಿಗೆ ಪರಿಹಾರ : ಮುಂದಿನ ವಾರದಲ್ಲಿ ಮೊದಲ ಹಂತದ ಪರಿಹಾರ ವಿತರಣೆ: ಸಿಎಂ

ಬೆಳಗಾವಿ:

     ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಳೆ ನಾಶದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಈಗಾಗಲೇ ಸರ್ಕಾರ ಘೋಷಿಸಿರುವ ರೂ.2,000 ವರೆಗಿನ  ಮೊದಲ ಹಂತದ ಪರಿಹಾರವನ್ನು ಮುಂದಿನ ವಾರದೊಳಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

    ಸುವರ್ಣ ವಿಧಾನಸೌಧದಲ್ಲಿ ಬುಧವಾರ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿದ ಮುಖ್ಯಮಂತ್ರಿ, ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತಷ್ಟು ಯುದ್ಧೋಪಾದಿಯಲ್ಲಿ ಕೆಲಸ ಮುಂದುವರೆಸಬೇಕು ಎಂದರು.

    ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುವ ಕುರಿತು ಸಮಗ್ರ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಂಕಿ-ಅಂಶಗಳ ಸಹಿತ ಒದಗಿಸಬೇಕು. ನಿಗದಿತವಾಗಿ ತಮಗೆ ನಿಗಧಿ ಆಗಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.

    ಆಯವ್ಯಯ ಭಾಷಣದಲ್ಲಿ 143 ಘೋಷಣೆಗಳನ್ನು ಮಾಡಲಾಗಿದ್ದು, ಇದರಲ್ಲಿ ಈಗಾಗಲೇ 83 ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಿ, ಕಾರ್ಯಗತಗೊಳಿಸಲಾಗಿದೆ. ಉಳಿದ ಘೋಷಣೆಗಳನ್ನೂ ಶೀಘ್ರವೇ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಬೇಕು. ಗ್ಯಾರಂಟಿ ಯೋಜನೆಗಳಲ್ಲಿ ನೋಂದಾಯಿಸಿಕೊಂಡು ಇನ್ನೂ  ಸೌಲಭ್ಯ ದೊರಕದ ಅರ್ಹ ಕೆಲವು ಫಲಾನುಭವಿಗಳಿಗೆ ಸೌಲಭ್ಯ ದೊರಕಲು ಇರುವ ತಾಂತ್ರಿಕ ಅಡಚಣೆಗಳನ್ನು ಶೀರ್ಘವೇ ನಿವಾರಿಸಬೇಕು ಎಂದು ತಿಳಿಸಿದರು.
   ಅಧಿವೇಶನ ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು, ಸಚಿವರಿಗೆ ಸೂಕ್ತ ಸಲಹೆ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇಲಾಖೆಗಳಲ್ಲಿ ಕಡತಗಳ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು. ಸಚಿವ ಸಂಪುಟ ಸಭೆಯಲ್ಲಿಯೂ ಬಾಕಿ ಕಡತಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
   ವಿವಿಧ ಇಲಾಖೆಗಳಲ್ಲಿ ನ್ಯಾಯಾಲಯ ಉಲ್ಲಂಘನೆಯ ಪ್ರಕರಣಗಳನ್ನು ಅಡ್ವೊಕೇಟ್‌ ಜನರಲ್‌ ಜೊತೆ ಚರ್ಚಿಸಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳು ಜನ ಸಂಪರ್ಕ ಸಭೆ ನಡೆಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಅನಿವಾರ್ಯ ಸಂದರ್ಭಗಳನ್ನು ಹೊರತು ಪಡಿಸಿ, ಕಡತಗಳಲ್ಲಿ ಕನ್ನಡದಲ್ಲಿಯೇ ಟಿಪ್ಪಣಿ ಬರೆಯಬೇಕು. ಕನ್ನಡ ನಮ್ಮ ರಾಜ್ಯ ಭಾಷೆ, ಸಾರ್ವಭೌಮ ಭಾಷೆ ಎಂದು ತಿಳಿಸಿದರು.
    ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಕುರಿತು ಆದ್ಯತೆ ನೀಡಲು ಸಲಹೆ ನೀಡಿದ ಮುಖ್ಯಮಂತ್ರಿಗಳು ಟೆಂಡರ್‌ ಅಂದಾಜು ಸಿದ್ಧಪಡಿಸುವಾಗಲೇ ಎಲ್ಲ ಅಂಶಗಳನ್ನೂ ಒಳಗೊಂಡಂತೆ ಸಮಗ್ರವಾಗಿ ಅಂದಾಜನ್ನು ಸಿದ್ಧಪಡಿಸಬೇಕು. ಪರಿಷ್ಕೃತ ಅಂದಾಜುಗಳನ್ನು ಸಲ್ಲಿಸುವುದರಿಂದ ಯೋಜನೆಯ ವೆಚ್ಚ ಗಣನೀಯವಾಗಿ ಹೆಚ್ಚುತ್ತಿರುವುದಲ್ಲದೆ ಅನುಷ್ಠಾನವೂ ವಿಳಂಬವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಇದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಹಿರಿಯ ಅಧಿಕಾರಿಗಳ ಸಮಿತಿ ರಚಿಸಿದ್ದು, ಈ ಸಮಿತಿಯು ಮಾರ್ಗಸೂಚಿಗಳನ್ನು ರೂಪಿಸುತ್ತಿದೆ. ಇದು ಅಂತಿಮ ಹಂತದಲ್ಲಿದ್ದು, ಶೀಘ್ರವೇ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಆರ್ಥಿಕ ಇಲಾಖೆ ಹಾಗೂ ಮುಖ್ಯಮಂತ್ರಿಯವರ ಅಪರ  ಕಾರ್ಯದರ್ಶಿ ಎಲ್.ಕೆ. ಅತೀಕ್‌ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ