ಬೆಂಗಳೂರು:
ಹಿಂದೆ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 140 ರೂ.ಗಳಷ್ಟಿದ್ದ ಟೊಮೇಟೊ ಬೆಲೆ ಇದೀಗ ತೀವ್ರ ಕುಸಿತ ಕಂಡಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಟೊಮೇಟೊ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಕೆಜಿ ಟೊಮೇಟೊ 20 ರೂ.ಗೆ ಮಾರಾಟವಾಗುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಮೈಸೂರು ಎಪಿಎಂಸಿ ಯಾರ್ಡ್‌ನಲ್ಲಿ ಭಾನುವಾರ ಕೆಜಿ ಟೊಮೇಟೊ ಬೆಲೆ 14 ರೂ.ಗೆ ಇಳಿದಿದೆ.ಪೂರೈಕೆಯಲ್ಲಿ ಸುಧಾರಣೆ ಕಂಡಿದ್ದರಿಂದ ಕಳೆದ ವಾರ ಟೊಮೇಟೊ ಬೆಲೆ ಕೆಜಿಗೆ 18 ರಿಂದ 20 ರೂ. ಇತ್ತು ಎಂದು ಮೈಸೂರು ಎಪಿಎಂಸಿ ಕಾರ್ಯದರ್ಶಿ ಎಂ.ಆರ್. ಕುಮಾರಸ್ವಾಮಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಸರಕು ಪೂರೈಕೆಯು ಕಳೆದ ತಿಂಗಳಿಗೆ ಹೋಲಿಸಿದರೆ ಎರಡರಿಂದ ಮೂರು ಪಟ್ಟು ಸುಧಾರಿಸಿದೆ. ಹೀಗಾಗಿ, ಟೊಮೇಟೊ ಬೆಲೆಯಲ್ಲಿನ ತೀವ್ರ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಮೈಸೂರು ಎಪಿಎಂಸಿಯಲ್ಲಿ ಸಗಟು ದರದಲ್ಲಿ ಕೆಜಿ ಟೊಮೇಟೊ 140 ರೂ.ಗೆ ಮಾರಾಟವಾಗಿತ್ತು. ರಾಜ್ಯದಲ್ಲಿ ಕೆಜಿ ಟೊಮೇಟೊ ಇದೀಗ 30 ರೂ.ಗಳಿಗೆ ಮಾರಾಟವಾಗುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.