ಬೆಳಗಾವಿ:
ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬದುಕಲು ಕಷ್ಟವಾಗುತ್ತಿದ್ದು, ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ವಲಸೆ ಹೋಗುವುದಾಗಿ ಅಥಣಿ, ಚಿಕ್ಕೋಡಿ, ರಾಯಭಾಗ ಮತ್ತು ಕಾಗವಾಡ ಸುತ್ತಮುತ್ತಲಿನ ಬರಪೀಡಿತ ಪ್ರದೇಶಗಳ ಜನರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಇತ್ತೀಚೆಗೆ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ತಮ್ಮ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇವರೊಂದಿಗೆ ಕಾಗವಾಡ ಶಾಸಕ ರಾಜು ಕಾಗೆ ಇದ್ದರು. ಮುಂಗಾರು ಹಂಗಾಮಿನಲ್ಲಿ ತಮ್ಮ ಗ್ರಾಮಗಳಲ್ಲಿ ಮಳೆ ಕಡಿಮೆಯಾಗಿದೆ ಎಂದು ರೈತರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ಕೃಷ್ಣಾ ನದಿಯ ಮೂಲಕ ತಮ್ಮ ಗ್ರಾಮಕ್ಕೆ ಪ್ರವಾಹ ಉಂಟಾಗಿದೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ತಮ್ಮ ಗ್ರಾಮಗಳಲ್ಲಿ ಮಳೆಯ ಕೊರತೆಯಿಂದಾಗಿ ಬೆಳೆಗಳು ಹಾನಿಗೊಳಗಾಗಿವೆ ಮತ್ತು ಮೇವಿನ ಕೊರತೆಯಿಂದ ಜಾನುವಾರುಗಳ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ತಮ್ಮ ಹಳ್ಳಿಯ ಸುತ್ತಮುತ್ತ ಯಾವುದೇ ಉದ್ಯೋಗ ಸಿಗುತ್ತಿಲ್ಲ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಮಹಾರಾಷ್ಟ್ರಕ್ಕೆ ಉದ್ಯೋಗಕ್ಕೆ ಹೋಗುವಂತಾಗಿದೆ ಎಂದಿದ್ದಾರೆ.








