ಕೊಪ್ಪಳ
ರಾಜ್ಯದ ಕೊಪ್ಪಳ, ರಾಯಚೂರು ಜಿಲ್ಲೆಗಳನ್ನು ಭತ್ತದ ಕಣಜ ಎಂದು ಕರೆಯುತ್ತಾರೆ. ತುಂಗಭದ್ರಾ ಜಲಾಶಯದ ನೀರನ್ನು ಬಳಸಿ ಬೆಳೆಯುವ ಈ ಭಾಗದ ಭತ್ತಕ್ಕೆ ಬಹಳ ಬೇಡಿಕೆ ಇತ್ತು. ಆದರೆ, ಈ ಬಾರಿ ಭತ್ತದ ಬೆಲೆ ಗಣನೀಯವಾಗಿ ಕಡಿಮೆಯಾಗಿದ್ದು, ಭತ್ತದ ಬೆಳೆಗಾರರನ್ನು ಕಂಗಾಲು ಮಾಡಿದೆ. ಇನ್ನೊಂದಡೆ ಭತ್ತ ಖರೀದಿ ಕೇಂದ್ರವೂ ಆರಂಭವಾಗಿಲ್ಲ.
ಕೊಪ್ಪಳ ಜಿಲ್ಲೆ, ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿನ ರೈತರು ಬೆಳೆಯುವ ಪ್ರಮುಖ ಬೆಳೆ ಭತ್ತ. ಕೊಪ್ಪಳ ಜಿಲ್ಲೆಯಲ್ಲಿಯೇ ಆರವತ್ತೈದು ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ತುಂಗಭದ್ರಾ ಜಲಾಶಯದ ಕೆಳಭಾಗದಲ್ಲಿ ಬೆಳೆಯುವ ಭತ್ತಕ್ಕೆ ಹೆಚ್ಚಿನ ಡಿಮ್ಯಾಂಡ್ ಕೂಡಾ ಇದೆ. ಆದರೆ, ಕಳೆದ ವರ್ಷ ಬರಗಾಲದಿಂದಾಗಿ ಭತ್ತದ ಬೆಳೆಗಾರರು ಬೆಳೆ ಬೆಳೆಯಲಾರದೇ ಕಂಗಾಲಾಗಿದ್ದರು. ಆದರೆ, ಈ ಬಾರಿ ಉತ್ತಮ ಮಳೆ, ಬೆಳೆ ಬಂದರೂ ರೈತರು ಮತ್ತೆ ತೊಂದರೆಗೆ ಸಿಲುಕುವಂತಾಗಿದೆ. ಇದಕ್ಕೆ ಕಾರಣ, ಭತ್ತದ ಬೆಲೆ ಕುಸಿತವಾಗಿರುವುದು.
ಕೆಲ ದಿನಗಳ ಹಿಂದಷ್ಟೇ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಭತ್ತಕ್ಕೆ ಪ್ರತಿ ಎಪ್ಪತ್ತೈದು ಕಿಲೋ ತೂಕದ ಭತ್ತದ ಚೀಲಕ್ಕೆ 2300 ರೂಪಾಯಿ ಇತ್ತು. ಆದರೆ, ಸದ್ಯ 1500 ರೂಪಾಯಿಗೆ ಇಳಿಕೆಯಾಗಿದೆ. ಇನ್ನು 2500 ರೂಪಾಯಿಗೆ ಮಾರಾಟವಾಗುತ್ತಿದ್ದ ಆರ್ಎನ್ಆರ್ ಭತ್ತದ ಬೆಲೆ ಸದ್ಯ 1800 ರೂಪಾಯಿಗೆ ಕುಸಿತವಾಗಿದೆ. ಇನ್ನು ಗಂಗಾ ಕಾವೇರಿ ಭತ್ತ 1800 ರೂಪಾಯಿಗೆ ಮಾರಾಟವಾಗಿತ್ತು. ಆದರೆ ಸದ್ಯ 1400 ರೂಪಾಯಿಗೆ ಇಳಿಕೆಯಾಗಿದೆ. ಅಂದರೆ, ಪ್ರತಿ ಕ್ವಿಂಟಲ್ ಭತ್ತದ ಬೆಲೆ 500 ರಿಂದ 1000 ರೂಪಾಯಿಯಷ್ಟು ಕಡಿಮೆಯಾಗಿದೆ. ಇಷ್ಟು ಬೆಲೆಗೆ ಭತ್ತ ಮಾರಾಟ ಮಾಡಿದರೆ ರೈತರಿಗೆ ಲಾಭವಲ್ಲ, ಮಾಡಿದ ಖರ್ಚು ಕೂಡಾ ಬರುವುದಿಲ್ಲ ಎಂದಿದ್ದಾರೆ ರೈತ ಮುತ್ತುಸ್ವಾಮಿ.
ಪ್ರತಿ ಎಕರೆಗೆ ಭತ್ತ ಬೆಳೆಯಲು ಸರಿಸುಮಾರು ನಲವತ್ತು ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ, ಇದೀಗ ಬೆಲೆ ಇಳಿಕೆಯಿಂದ ರೈತರಿಗೆ ಭತ್ತ ಬೆಳೆಯಲು ಮಾಡಿದ ಸಾಲ ಕೂಡ ತೀರಿಸಲಾಗದಂಥ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೆಲೆ ಕಡಿಮೆಯಾಗಿದ್ದು ಒಂದಡೆಯಾದರೆ, ಭತ್ತ ಖರೀದಿಗೆ ಕೂಡಾ ವ್ಯಾಪರಸ್ಥರು ಮುಂದಾಗುತ್ತಿಲ್ಲ. ಹೀಗಾಗಿ ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ರೈತರು ಭತ್ತವನ್ನು ಮರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಹೆಚ್ಚಿನ ಪ್ರಮಾಣದ ಭತ್ತ ಉತ್ಫಾದನೆಯಾಗಿರುವುದರಿಂದ ವ್ಯಾಪರಸ್ಥರು ಬೆಲೆ ಕಡಿಮೆ ಮಾಡಿದ್ದಾರಂತೆ. ಹೀಗಾಗಿ ಸರ್ಕಾರ ಕೂಡಲೆ ಪ್ರತಿ ಕ್ವಿಂಟಲ್ಗೆ ಎರಡೂವರೆ ಸಾವರಿಂದ ಮೂರು ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಖರೀದಿ ಕೇಂದ್ರವನ್ನು ಆರಂಭ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಭತ್ತ ಖರೀದಿ ಕೇಂದ್ರ ಆರಂಭದಿಂದ ಮಾರುಕಟ್ಟೆಯಲ್ಲಿ ಕೂಡಾ ವ್ಯಾಪರಸ್ಥರು ಹೆಚ್ಚಿನ ಬೆಲೆಗೆ ಖರೀದಿಸುತ್ತಾರೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಆರಂಭದಲ್ಲಿಯೇ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಕೊನೆಯ ಹಂತದಲ್ಲಿ ಖರೀದಿ ಕೇಂದ್ರ ಆರಂಬಿಸಿದರೆ ಪ್ರಯೋಜನವಾಗುವುದಿಲ್ಲ. ಕೂಡಲೇ ಸರ್ಕಾರ ರೈತರ ನೆರವಿಗೆ ಬರಬೇಕು ಅಂತ ರೈತರು ಆಗ್ರಹಿಸುತ್ತಿದ್ದಾರೆ.
ಈಗಾಗಲೇ ಭತ್ತದ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಬೆಲೆ ಇಳಿಕೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಹೀಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕಿದೆ. ಭತ್ತದ ಬೆಲೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕಿದೆ.