ತುಮಕೂರು:
ಕೇಂದ್ರದ ವಿವಿಧ ಕೃಷಿಕಾಯ್ದೆ ವಿರೋಧಿಸಿ ಸಂಯುಕ್ತ ಹೋರಾಟ
(ಹೋರಾಟದಲ್ಲಿ ಜಾನುವಾರುಗಳು ಭಾಗಿ,ರಸ್ತೆಯಲ್ಲೆ ಅಡುಗೆ ಮಾಡಿ ಊಟ)
ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಚಳವಳಿ ಪ್ರಾರಂಭಿಸಿ ಈ ನವೆಂಬರ್ 26 ಕ್ಕೆ 1 ವರ್ಷ ತುಂಬಲಿದ್ದು, ಆ ದಿನ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ತೀರ್ಮಾನಿಸಿದೆ ಎಂದು ಕರ್ನಾಟ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ತಿಳಿಸಿದರು.
ನಗರದ ವಿಜ್ಞಾನ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆಗಳು ಮತ್ತು ಉದ್ದೇಶಿತ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ ಹಾಗೂ ಕಾರ್ಮಿಕ ತಿದ್ದುಪಡಿ ಕಾಯ್ದೆಗಳು ಜನವಿರೋಧಿ, ದೇಶವಿರೋಧಿ, ಸಂವಿಧಾನ ವಿರೋಧಿ ಕಾಯ್ದೆಗಳಾಗಿದ್ದು ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವವರೆಗೂ ನಿರಂತರ ಚಳವಳಿ ನಡೆಸಲು ರೈತ, ದಲಿತ, ಕಾರ್ಮಿಕ, ಮಹಿಳೆ, ವಿದ್ಯಾರ್ಥಿ, ಯುವ ಜನತೆ ಚಳವಳಿಗಳು ತೀರ್ಮಾನಿಸಿದ್ದು, ಈ ಚಳುವಳಿ ಪ್ರಾರಂಭವಾಗಿ ನವೆಂಬರ್ 26 ಕ್ಕೆ 1 ವರ್ಷವಾಗಲಿದ್ದು, ಈ ಚಳವಳಿಯನ್ನು ದೇಶಾದ್ಯಂತ ಮತ್ತಷ್ಟು ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಕರ್ನಾಟಕದಲ್ಲಿ ಅಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾವಿರಾರು ಸಂಖ್ಯೆಯ ರೈತರು ತಮ್ಮ ಹಸು, ಎಮ್ಮೆ, ಎತ್ತು, ಕೋಳಿ, ಕುರಿ, ಎತ್ತಿನಗಾಡಿ, ಟ್ರಾಕ್ಟರ್, ಟಿಲ್ಲರ್ ಇತ್ಯಾದಿಗಳನ್ನು ರಸ್ತೆಗೆ ಇಳಿಸಲು ತೀರ್ಮಾನಿಸಿದ್ದೇವೆ ಹಾಗೂ ಚಳವಳಿ ದಿನ ಸ್ಥಳದಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಡಿಸೆಂಬರ್‍ನಲ್ಲಿ ಮಹಾ ಪಂಚಾಯತ್ : ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ಮಾತನಾಡಿ, ರಾಜ್ಯದ ಕನಿಷ್ಠ 10 ಕಡೆ ಕಿಸಾನ್ ಮಹಾ ಪಂಚಾಯತ್‍ಗಳನ್ನು ನಡೆಸಲು ಕೂಡಾ ಸಂಯುಕ್ತ ಕರ್ನಾಟಕ ತೀರ್ಮಾನಿಸಿದ್ದು, ಈ ಕಾರ್ಯಕ್ರಮಕ್ಕೆ ಪೂರಕವಾಗಿ ಆಯಾ ವ್ಯಾಪ್ತಿಯ ಹಳ್ಳಿಗಳಲ್ಲಿ ಜಾಥಾ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸಲಾಗುವುದು. ಈ ಮಹಾ ಪಂಚಾಯತ್‍ನಲ್ಲಿ ರಾಷ್ಟ್ರ ಮಟ್ಟದ ನಾಯಕರು ಹಾಗೂ ದಕ್ಷಿಣ ಭಾರತದ ಇತರ ಮುಖಂಡರುಗಳು ಭಾಗವಸಹಿಸಲಿದ್ದಾರೆ ಎಂದರು.
ಪರ್ಯಾಯ ಜನಾಧಿವೇಶನ : ರಾಜ್ಯ ರೈತ ಸಂಘದ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಬಜೆಟ್ ಕಲಾಪ ಪೂರ್ವ ಬೆಂಗಳೂರಿನಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಜನರು ಸಮಾವೇಷಗೊಂಡು ಜ.26 ರಂದು ಪರ್ಯಾಯ ಜನಾಧಿವೇಶನವನ್ನು ನಡೆಸಲು ತೀರ್ಮಾನಿಸಲಾಗಿದ್ದು, ಈ ಅಧಿವೇಶನದಲ್ಲಿ ಜನ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಲಾಗುವುದು ಮತ್ತು ಪರ್ಯಾಯ ಆರ್ಥಿಕ ಚಿಂತನೆಗಳ ಬಗ್ಗೆ ರೂಪುರೇಷೆಗಳನ್ನು ತಯಾರಿಸಲಾಗುವುದು ಎಂದರು.
ನಿರಂತರ ಹೋರಾಟದ ನಿರ್ಣಯ : ರಾಜ್ಯದ ರೈತ ವಿರೋಧಿ ಕಾಯ್ದೆಗಳಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋ ಹತ್ಯೆ ನಿಷೇಧ ಉಂಟಾಗಿರುವ ಸಾಮಾಜಿಕ ಪರಿಣಾಮಗಳ ಬಗ್ಗೆ ಪ್ರಸ್ತುತವಾಗಿ ಈ ಜನಾಧಿವೇಶನದಲ್ಲಿ ಚರ್ಚಿಸಿ ಈ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ತೀರ್ಮಾನಿಸಿದ್ದು ಕಬ್ಬು ಬೆಳೆಗಾರರ ಸಮಸ್ಯೆ, ಬಗರ್‍ಹುಕುಂ ಸಾಗುವಳಿ, ಅರಣ್ಯ ಇಲಾಖೆಯಿಂದ ಸಾಗುವಳಿದಾರರಿಗೆ ಆಗುತ್ತಿರುವ ತೊಂದರೆ, ವಸತಿ ರೈತರ ಸಮಸ್ಯೆ ಆದಿವಾಸಿ ಮತ್ತು ದಲಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಈ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವನ್ನು ಆಗ್ರಹಿಸಲಾಗುವುದು ಮತ್ತು ನಿರಂತರವಾಗಿ ಹೋರಾಟ ನಡೆಸಲು ನಿರ್ಣಯಿಸಲಾಗುವುದು ಎಂದು ಗೋವಿಂದರಾಜು ನುಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿ.ಗೋಪಾಲ್, ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ವಿಭಾಗೀಯ ಕಾರ್ಯದರ್ಶಿ ಡಾ.ಚೌಕೀಮಠ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಯಾಕೂಬ್ ಷರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಲಕ್ಷ್ಮೀ ನಾರಾಯಣರೆಡ್ಡಿ, ಕೋಲಾರ ಜಿಲ್ಲಾಧ್ಯಕ್ಷ ಮರುಗಲ್ ಶ್ರೀನಿವಾಸ್, ರಾಮನಗರ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಸುರೇಶ್‍ಬಾಬು, ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಪ್ರಗತಿಪರ ಕೃಷಿಕ ರವೀಶ್ ಸೇರಿದಂತೆ ರೈತ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಪ್ಪು ಬಾವುಟ ಪ್ರದರ್ಶನ : ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ಕಾರ್ಮಿಕ ವಿರೋಧಿ ಕಾನೂನುಗಳನ್ನು ಪ್ರತಿಭಟಿಸಿ ರಾಜ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಕೆಂದ್ರ ಮಂತ್ರಿಗಳು ಮತ್ತು ಮುಖ್ಯಮಂತ್ರಿಯೂ ಸೇರಿದಂತೆ ರಾಜ್ಯದ ಸಚಿವರುಗಳ ವಿರುದ್ಧ ಕಪ್ಪು ಬಾವುಟ ತೋರಿಸಲು ಸಂಯುಕ್ತ ಹೋರಾಟ ಕರ್ನಾಟಕ ತೀರ್ಮಾನಿಸಿದ್ದು ಈ ತಿಂಗಳ 28 ರಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
-ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷರು, ರಾಜ್ಯ ರೈತ ಸಂಘ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ