ಸಾರಿಗೆ ಬಸ್’ಗಳ ನಡುವೆ ಅಪಘಾತ: ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಗದಗ: 

     ಸಾರಿಗೆ ಬಸ್ ಗೆ ಹಿಂಬದಿಯಿಂದ ಮತ್ತೊಂದು ಸಾರಿಗೆ ಬಸ್ ಡಿಕ್ಕಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ಗದಗ ತಾಲೂಕಿನ ಹರ್ತಿ ಬಳಿ ಜರುಗಿದೆ. ಈ ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿರುವುದಾಗಿ ವರದಿಯಾಗಿದೆ.

     ತಾಲೂಕಿನ ಹರ್ತಿ ಬಳಿ ನಿಲ್ಲಿಸಿದ್ದ ಸಾರಿಗೆ ಬಸ್’ಗೆ ಲಕ್ಷ್ಮೇಶ್ವರದಿಂದ ಗದಗಕ್ಕೆ ತೆರಳುತ್ತಿದ್ದ ಮತ್ತೊಂದು ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 12 ಪ್ರಯಾಣಿಕರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

    ಹಾವೇರಿ ಜಿಲ್ಲೆ ಕಾಗಿನೆಲೆಯಿಂದ ಗದಗ ಮಾರ್ಗವಾಗಿ ಕುಕನೂರಗೆ ಹೊರಟಿದ್ದ ಮತ್ತೊಂದು ಬಸ್ ಹಿಂಬದಿಯಿಂದ ಡಿಕ್ಕಿಯಾಗಿದೆ. ವೇಗವಾಗಿ ಬಂದ ಬಸ್ ಚಾಲಕನ ನಿಯಂತ್ರಣಕ್ಕೆ‌ ಸಿಗದೆ ಡಿಕ್ಕಿಯಾಗಿದೆ ಎನ್ನಲಾಗುತ್ತಿದೆ.

    ಲಭ್ಯವಿರುವ ಮಾಹಿತಿಗಳ ಪ್ರಕಾರ, ಕುಕನೂರ ಘಟಕದ ಬಸ್‌ ಮುಂದಿನ ಗಾಜು ಪುಡಿಪುಡಿಯಾಗಿದ್ದು ಈ ವೇಳೆ ಬಸ್‌ನಲ್ಲಿದ್ದ ಸುಮಾರು 12 ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಸ್ಥಿತಿಯಲ್ಲಿರುವ ಇಬ್ಬರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇನ್ನೂ ಘಟನಾ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Recent Articles

spot_img

Related Stories

Share via
Copy link