ಬೆಂಗಳೂರು
ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚಿನ ಅಕ್ಕಿ ವಿತರಣೆಗೆ ಕೇಂದ್ರದ ಕೈಗೊಂಬೆಯಾಗಿರುವ ಭಾರತೀಯ ಆಹಾರ ನಿಗಮ ನಿರಾಕರಿಸಿರುವುದು ಬಿಜೆಪಿಯ ಬಡವರ ವಿರೋಧಿ ಹಾಗೂ ಪ್ರಧಾನಿಯ ಶತ್ರುತ್ವದ ನೀತಿ ಬಯಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಟೀಕಿಸಿದ್ದಾರೆ.
ರಾಜ್ಯಕ್ಕೆ ಅನ್ಯಾಯ ಮಾಡಿರುವ ಧೋರಣೆ ಪ್ರತಿಭಟಿಸಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಅನ್ನಭಾಗ್ಯ ಯೋಜನೆಯಲ್ಲಿ ಬಡ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಉಚಿತ ನೀಡಲಾಗುವುದು. 1.28 ಕೋಟಿ ಕುಟುಂಬಗಳ 4.42 ಕೋಟಿ ಜನರು ಫಲಾನುಭವಿಗಳಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಇದಕ್ಕೆ ಬೇಕಾಗುವ ?11,000 ಕೋಟಿ ನೀಡಲು ಸಿದ್ಧವಿದೆ. ಆದರೂ ಮೋದಿ ಸರ್ಕಾರ ಭಾರತೀಯ ಆಹಾರ ನಿಗಮಕ್ಕೆ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡದಂತೆ ನಿರ್ದೇಶನ ನೀಡಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಭಾರತೀಯ ಆಹಾರ ನಿಗಮದ ಬಳಿ ಹೆಚ್ಚುವರಿ ಅಕ್ಕಿ ದಾಸ್ತಾನು ಇದ್ದು, ಎಫ್.ಸಿ.ಐ ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳಿಗೆ ಅಕ್ಕಿ ಮಾರಲು ಮುಂದಾಗಿದೆ, ಆದರೆ ರಾಜ್ಯಕ್ಕೆ ನೀಡಲು ಸಿದ್ಧವಿಲ್ಲ. ಇದು ಭ್ರಷ್ಟ ಬಿಜೆಪಿಯನ್ನು ಬಡಿದೊಡಿಸಿದ ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ಮತ್ತು ಬಡವರ ವಿರುದ್ಧ ಬಿಜೆಪಿ ಹಾಗೂ ಮೋದಿ ಸರ್ಕಾರಕ್ಕೆ ಇರುವ ದ್ವೇಷವನ್ನು ತೋರುತ್ತಿದೆ ಎಂದಿದ್ದಾರೆ.
ಇಲ್ಲಿರುವ ಪ್ರಮುಖ ಪ್ರಶ್ನೆ ಎಂದರೆ, ತನ್ನ ಸೋಲಿನಿಂದಾಗಿ ಜನರಿಗೆ ಅನ್ನ ನಿರಾಕರಿಸುವಷ್ಟರ ಮಟ್ಟಿಗೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಕುರುಡರಾಗಿದ್ದಾರೆಯೇ?. ಎಫ್.ಸಿ.ಐ ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳಿಗೆ ಅಕ್ಕಿ ಮಾರಲು ಸಿದ್ಧವಿದೆ. ಆದರೆ, ರಾಜ್ಯಕ್ಕೆ ಉತ್ತಮ ದರದಲ್ಲಿ ಅಕ್ಕಿ ನೀಡಲು ನಿರ್ಬಂಧ ಹೇರಿರುವುದು ಏಕೆ ಎಂದು ಸುರ್ಜೇವಾಲ ಖಾರವಾಗಿ ಪ್ರಶ್ನಿಸಿದ್ದಾರೆ.
ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಬಡ ಕುಟುಂಬಗಳಿಗೆ ಉಚಿತ ಅಕ್ಕಿ ನೀಡಬಾರದು ಎಂಬ ಒಂದೇ ಉದ್ದೇಶದಿಂದ ಈ ತೀರ್ಮಾನ ಮಾಡಿದೆಯಲ್ಲವೇ?, ಕಾಂಗ್ರೆಸ್ ಸರ್ಕಾರ ಎಫ್.ಸಿ.ಐ ಗೆ ಹೆಚ್ಚುವರಿ ಅಕ್ಕಿ ನೀಡುವಂತೆ ಕೇಳಿದ ನಂತರ ಕೇಂದ್ರ ಸರ್ಕಾರವು ಕೇವಲ ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಮಾರಾಟ ಮಾಡುವಂತೆ ನಿರ್ದೇಶನ ನೀಡಿರುವುದು ಸ್ವಲ್ಪ ಅತಿಯಾದ ಕಾಕತಾಳೀಯವಲ್ಲವೇ?, ಬಿಜೆಪಿ ಹಾಗೂ ಮೋದಿ ಸರ್ಕಾರದ ಬೆಂಬಲವಿರುವ ದೊಡ್ಡ ವ್ಯಾಪಾರಿಗಳ ಕೂಟ ಬಡವರ ಅಕ್ಕಿಯನ್ನು ಕಸಿಯಲು ಮುಂದಾಗಿದೆಯೇ?
ರಾಜ್ಯದ ಸಂಸದರು, ಕೇಂದ್ರದ ಮಂತ್ರಿಗಳು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಕಂಡು ಮೌನವಾಗಿರುವುದೇಕೆ? ಇಷ್ಟಾದರೂ ಅವರು ಸಂಸದ ಹಾಗೂ ಸಚಿವ ಸ್ಥಾನದಲ್ಲಿ ಒಂದು ದಿನ ಮುಂದುವರಿಯಲು ಯೋಗ್ಯರೇ? ರಾಜ್ಯದ ಆರೂವರೆ ಕೋಟಿ ಜನರಿಗೆ ದ್ರೋಹ ಬಗೆದಿರುವ ಅವರು ಕೂಡಲೇ ಯಾಕೆ ರಾಜೀನಾಮೆ ನೀಡಬಾರದು?
ರಾಜ್ಯ ಬಿಜೆಪಿ ನಾಯಕರು ಬಡವರು, ಎಸ್ ಸಿ, ಎಸ್ ಟಿ, ಒಬಿಸಿ ಬಡ ಕುಟುಂಬಗಳಿಗೆ ಅಕ್ಕಿ ನಿರಾಕರಿಸಿರುವ ವಿಚಾರದಲ್ಲಿ ಬಾಯಿಗೆ ಬೀಗ ಹಾಕಿಕೊಂಡಿರುವುದು ಏಕೆ? ಅವರ ಮೌನದ ಮೂಲಕ ಮೋದಿ ಸರ್ಕಾರ ಅಕ್ಕಿ ನೀಡದಂತೆ ನಿರ್ದೇಶನ ನೀಡಲು ಒತ್ತಡ ಏರಿದ್ದು ಇವರೇ ಎಂದು ಸಾಬೀತುಪಡಿಸುತ್ತಿದೆಯೆ?. ಮೋದಿ ಸರ್ಕಾರದ ಕರ್ನಾಟಕ ಹಾಗೂ ಬಡವರ ವಿರೋಧಿ ನೀತಿ ಬಗ್ಗೆ ಬಿಜೆಪಿಯ ಬಿ ಟೀಮ್ ಆಗಿರುವ ಜೆಡಿಎಸ್ ಯಾಕೆ ಮೌನವಾಗಿದೆ? ಎಂದು ಕುಟುಕಿದ್ದಾರೆ.
ಒಂದು ವಿಚಾರ, ಬಿಜೆಪಿ ಸರ್ಕಾರ ಎಷ್ಟೇ ಅಡ್ಡಿಪಡಿಸಿದರು ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಬಡ ಕುಟುಂಬಗಳ ವಿರೋಧಿ ನೀತಿ ಹಾಗೂ ದ್ವೇಷವನ್ನು ಕನ್ನಡಿಗರು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ