ಮಾಲೂರು:

ಗುರುಬ್ರಹ್ಮ ಗುರುರ್ವಿಷ್ಣು
ಗುರುಃದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಃ ಬ್ರಹ್ಮ
ತಸ್ಮೈಶ್ರೀ ಗುರವೇ ನಮಃ ಇದಕ್ಕೆ ಅರ್ಥ ಸಿಗುವಂತೆ ತೊರ‍್ನಹಳ್ಳಿಯಲ್ಲಿ ಅದ್ದೂರಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಿವೃತ್ತ ಮುಖ್ಯ ಶಿಕ್ಷಕರಾದ ಡಿ.ಸಿ.ಮುನಿರಾಜು ರವರನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಊರಿನ ತುಂಬೆಲ್ಲಾ ಮೆರವಣಿಗೆ ಮಾಡಿ,ಜಯ ಘೋಷಣೆಗಳನ್ನು ಕೂಗುತ್ತಾ ತಮ್ಮ ಗುರುಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿ ಅದ್ದೂರಿ ಬೀಳ್ಕೊಡುಗೆ
ತಂದೆ ತಾಯಿ ಶಿಕ್ಷಕರು ದೇವರ ಸಮಾನ ಅನ್ನುತ್ತಾರೆ. ತಮಗೆ ವಿದ್ಯೆ ಬುದ್ದಿ ಕಲಿಸಿದ ನಿವೃತ್ತ ಮುಖ್ಯಶಿಕ್ಷಕರಾದ ಡಿ.ಸಿ. ಮುನಿರಾಜು ಅವರನ್ನು ಅವರ ಹಳೆಯ ವಿದ್ಯಾರ್ಥಿಗಳು ದೇವರನ್ನು ಮೆರವಣಿಗೆ ಮಾಡುವ ರೀತಿಯಲ್ಲಿ ತೊರ‍್ನಹಳ್ಳಿ ಗ್ರಾಮದ ತುಂಬೆಲ್ಲ ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿ ಇನ್ನೂ ಗುರುವಿನ ಬೆಲೆ ಇಂದಿನ ದಿನಗಳಲ್ಲಿ ಎಲ್ಲೂ ಕಡಿಮೆಯಾಗಿಲ್ಲ ಎಂದು ಸಾಬೀತು ಮಾಡಿದ್ದಾರೆ.
ಪಲ್ಲಕ್ಕಿ ಬರುತ್ತಿದ್ದರೆ ರಸ್ತೆಯ ಬದಿಯಲ್ಲಿ ಜನರು ನಿಂತು ಆತ್ಮೀಯವಾಗಿ ಬೀಳ್ಕೊಡುತ್ತಿದ್ದರು. ಸುಮಾರು 35 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಈ ಗುರುವಿಗೆ ಜಿಲ್ಲೆಯಲ್ಲಿಯೇ ಹಿಂದೆಂದೂ ಯಾರು ಮಾಡದ ರೀತಿಯಲ್ಲಿ ಸನ್ಮಾನ ಮಾಡಿ ಬೀಳ್ಕೊಟ್ಟರು.
ಶಿಕ್ಷಕರು ತನ್ನ ವೃತ್ತಿಯನ್ನು ಶ್ರದ್ಧಾ ಭಕ್ತಿಯಿಂದ ಗೌರವಿಸಬೇಕು, ಹಾಗೆಯೇ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಮೌಲ್ಯಗಳನ್ನು ಕಲಿಸಬೇಕು ಎಂದು ತೊರ‍್ನಹಳ್ಳಿಯ ರಮಾ ಮಾಧವ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಡಿ.ಸಿ. ಮುನಿರಾಜು ರವರು ತಿಳಿಸಿದರು.
ತಾವು ಕಷ್ಟಪಟ್ಟು ಬೆಳೆಸಿದಂತಹ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ತಮ್ಮ ಹಲವು ನೆನಪುಗಳನ್ನು ತಿಳಿಸುತ್ತಾ ಮಾತನಾಡಿದರು. ಜೊತೆಗೆ ತನ್ನ ಜೊತೆ ಕಾರ್ಯ ನಿರ್ವಹಿಸಿದ ಇತರ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳನ್ನು ನೋಡಿ ಸಂತಸಗೊಂಡರು.
ಈ ಕಾರ್ಯಕ್ರಮಕ್ಕೆ ಮೊದಲು ಗಿಡಕ್ಕೆ ನೀರನ್ನು ಹಾಕುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಮಾ ಮಾಧವ ಶಾಲೆಯನ್ನು ಬೆಳೆಸುವುದಕ್ಕೆ ಊರಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಸಹಕರಿಸಿದ ರೀತಿಯನ್ನು ಅವರು ಈ ಸಂದರ್ಭದಲ್ಲಿ ನೆನೆಪಿಸಿಕೊಂಡರು.
ಡಿ.ಸಿ.ಮುನಿರಾಜು ರವರು ಅತ್ಯಂತ ಶ್ರದ್ದೆ, ಆಸಕ್ತಿಯಿಂದ ಉತ್ತಮ ಬೋಧನೆ ಮತ್ತು ಶಾಲಾ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಅವರ ಬಾಳು ಬೆಳಕಾಗಿಸಿದ್ದಾರೆ ಎಂದು ಮಾಲೂರಿನ ನಿಕಟಪೂರ್ವ ಹಾಗೂ ಪ್ರಸ್ತುತ ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ವೆಂಕಟರಾಮರೆಡ್ಡಿಯವರು ತಿಳಿಸಿದರು.
ಡಿ.ಸಿ.ಮುನಿರಾಜು ರವರು ನಿಷ್ಠಾವಂತ ವ್ಯಕ್ತಿಯಾಗಿದ್ದು, ಗ್ರಾಮದ ಜನರ ಸಹಕಾರದೊಂದಿಗೆ ಶಾಲೆಯನ್ನು ಮಾಲೂರು ತಾಲ್ಲೂಕಿನ ಲ್ಲಿಯೇ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ. ಜೊತೆಗೆ ಇಷ್ಟೊಂದು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಮೆಚ್ಚುಗೆಯನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಮಾಲೂರು ತಾಲ್ಲೂಕಿನ ತೊರ‍್ನಹಳ್ಳಿ ಗ್ರಾಮದ ರಮಾ ಮಾಧವ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಮುಖ್ಯಶಿಕ್ಷಕರಾದ ಡಿ.ಸಿ.ಮುನಿರಾಜು ರವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯವಾಗಿ ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ರಾಮಸಂದ್ರ ಗ್ರಾಮದ ಚಂದ್ರಮೌಳಿ ಹಾಗೂ ಬಸವರಾಜು ಹಾಗೂ ಇತರರು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಸಿ.ವಿ.ವೆಂಕಟರಮಣಪ್ಪ, ನಾಗರಾಜಪ್ಪ, ಮಾಜಿ ಅಧ್ಯಕ್ಷ ಮುನಿಶಾಮಪ್ಪ, ನಾರಾಯಣಪ್ಪ, ಶಿಕ್ಷಕರಾದ ರಾಮಾಂಜನೇಯ, ಚಿಕ್ಕ ರಾಮಾಂಜಿ, ಬಸವರಾಜು, ರಾಘವೇಂದ್ರ, ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ,
ಶಿಕ್ಷಣಾಧಿಕಾರಿ ಅಶೋಕ್, ನಾಗೇಂದ್ರ ಪ್ರಸಾದ್, ಚಂದ್ರಮೌಳಿ,ಬಸವರಾಜ, ಜ್ಞಾನಮೂರ್ತಿ ರಾಮಸಂದ್ರ,
ಶರವಣ,ರಮೇಶ್ ಬಾಬು, ವೆಂಕಟಾಚಲಪತಿ, ಗೋಪಾಲಕೃಷ್ಣ, ಚೇತನ್ ಭಾರ್ಗವ್, ನಾರಾಯಣಸ್ವಾಮಿ, ಹಾಗೂ ರಮಾ ಮಾಧವ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








