ಬೆಂಗಳೂರನ್ನೂ ನಡುಗಿಸುತ್ತಿದೆ ಫೆಂಗಲ್….!

ಬೆಂಗಳೂರು

   ಫೆಂಗಲ್ ಚಂಡಮಾರುತ ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶಗಳಲ್ಲಿ ತಲ್ಲಣ ಸೃಷ್ಟಿಸಿದೆ. ನೆರೆಯ ರಾಜ್ಯಕ್ಕೆ ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಬೆಂಗಳೂರಿಗೂ ತಟ್ಟಿದೆ. ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಭಾನುವಾರ ಇಡೀ ದಿನ ಮಳೆ ಸುರಿದಿದೆ. ಭಾನುವಾರ ಮಧ್ಯಾಹ್ನದ ನಂತರವಂತೂ ಬಿಡುವುಕೊಡದೇ ಮಳೆ ಸುರಿದಿದ್ದು, ಸೋಮವಾರ ಮುಂಜಾನೆಯೂ ಮಳೆಯಾಗುತ್ತಿದೆ. 

    ಫೆಂಗಲ್ ಸೈಕ್ಲೋನ್​ ಪರಿಣಾಮ ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಮಳೆಯಾಗುತ್ತಿದೆ. ಶೀತಗಾಳಿ ಬೀಸುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೋಲಾರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಹಾಗೇ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಶಾಲೆ, ಕಾಲೇಜುಗಳಿಗೆ ಇಂದು ರಜೆ ಪ್ರಕಟಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳು ರಜೆ ಘೋಷಣೆ ಮಾಡಿಲ್ಲ. ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಡಿಸಿ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಪೋಷಕರು ಎಚ್ಚರಿಕೆಯಿಂದ ಮಕ್ಕಳನ್ನ ಶಾಲೆಗೆ ಕಳುಹಿಸುವಂತೆ ಸೂಚಿಸಿದ್ದಾರೆ. 

   ಸೈಕ್ಲೋನ್​​ನಿಂದಾಗಿ ಮಂಗಳೂರು ಸಮುದ್ರ ತೀರದಲ್ಲಿ ಅಲೆಗಳ ಆರ್ಭಟ ಜೋರಾಗಿದೆ. ಪಣಂಬೂರು, ಉಳ್ಳಾಲ, ಸೋಮೇಶ್ವರ ಬೀಚ್​ಗಳಲ್ಲಿ ದೊಡ್ಡ ದೊಡ್ಡ ಅಲೆಗಳು ಏಳುತ್ತಿವೆ. ಉಡುಪಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಡಲಲ್ಲಿ ಬೃಹತ್ ಅಲೆಗಳು ಏಳುತ್ತಿದ್ದರೂ ಮಲ್ಪೆ ಬೀಚ್​​ನಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿದು ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಕಾಣಿಸಿದೆ.

   ಚಿಕ್ಕಮಗಳೂರಿನಲ್ಲಿ ಥಂಡಿ ಚಳಿಗೆ ಮಲೆನಾಡಿಗರು ಹೈರಾಣಾಗಿದ್ದಾರೆ. ಮತ್ತೊಂದೆಡೆ ಬಿಸಿಲನಾಡು ವಿಜಯಪುರದಲ್ಲೂ ಶೀತಗಾಳಿ ಬೀಸುತ್ತಿದೆ. ದ್ರಾಕ್ಷಿ ಬೆಳೆಗೆ ಕಂಟಕವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾದಲ್ಲಿ ಭೀತಿ ಸೃಷ್ಟಿಸಿದ್ದ ಫೆಂಗಲ್ ಚಂಡಮಾರುತ ತಮಿಳುನಾಡನ್ನು ಬೆಚ್ಚಿಬೀಳಿಸಿದೆ. ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿ ಕರಾವಳಿಗೆ ಸೈಕ್ಲೋನ್ ಅಪ್ಪಳಿಸಿದೆ. ಚಂಡಮಾರುತ ಬಂದಪ್ಪಳಿಸಿದ್ದಕ್ಕೆ ಭಾರೀ ಮಳೆಯಾಗಿದ್ದು, ಮಹಾನಗರ ಚೆನ್ನೈಯಲ್ಲಿ ನೆರೆ ಸೃಷ್ಟಿಯಾಗಿದೆ. 

   ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಂಧ್ರದಲ್ಲೂ ಚಂಡಮಾರುತವೂ ಮಳೆ ಸುರಿಸಿದೆ. ತಿರುಮಲದಲ್ಲಿ ದಟ್ಟ ಮಂಜು ಆವರಿಸಿತ್ತು. ರಾಯಲಸೀಮಾ, ಕಡಪ, ನೆಲ್ಲೂರು, ಚಿತ್ತೂರು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಫೆಂಗಲ್ ಸೈಕ್ಲೋನ್ ಎಫೆಕ್ಟ್ ಕೇರಳಕ್ಕೂ ತಟ್ಟಿದೆ. ಇವತ್ತು ವಯನಾಡು, ಮಲಪ್ಪುರಂ, ಕೋಯಿಕ್ಕೋಡ್ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್ ಘೋಷಿಸಲಾಗಿದೆ.

Recent Articles

spot_img

Related Stories

Share via
Copy link
Powered by Social Snap