ರಸಗೊಬ್ಬರದ ಬೆಲೆ ದಿಢೀರ್ ಹೆಚ್ಚಳದ ಶಾಕ್!!

 ತುಮಕೂರು:

      ಮೂರು ಕೃಷಿ ಕಾಯ್ದೆಗಳ ಔಚಿತ್ಯದ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ಮತ್ತು ಪ್ರತಿಭಟನೆಗಳು ಮುಂದುವರೆದಿರುವ ಬೆನ್ನಲ್ಲೇ ರಸಗೊಬ್ಬರ ಬೆಲೆ ದಿಢೀರ್ ಏರಿಕೆಯಾಗಿರುವುದು ಮತ್ತಷ್ಟು ಚರ್ಚೆಗಳಿಗೆ ಗ್ರಾಸ ಒದಗಿಸಿದೆ.

      ಏಪ್ರಿಲ್ 1 ರಿಂದಲೇ ಅನ್ವಯವಾಗುವಂತೆ ವಿವಿಧ ರಾಸಾಯನಿಕ ಗೊಬ್ಬರಗಳ ದರ ಅತ್ಯಧಿಕ ದರದಲ್ಲಿ ಏರಿಕೆ ಕಂಡಿದೆ. ಪ್ರತಿ 50 ಕೆ.ಜಿ.ಯ ಒಂದು ಚೀಲ ಡಿಎಪಿ ರಸಗೊಬ್ಬರ 1200 ರೂ.ಗಳಿಂದ 1900 ರೂ.ಗಳಿಗೆ ಏರಿಕೆಯಾಗಿದೆ. 1175 ರೂ.ಗಳಿಷ್ಟಿದ್ದ ಎನ್.ಪಿ.ಕೆ. ರಸಗೊಬ್ಬರ 1775 ರೂ.ಗಳಿಗೆ ಜಿಗಿತವಾಗಿದೆ. ಕನಿಷ್ಠ 50 ಅಥವಾ 100 ರೂ.ಗಳಿಗೆ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ ದಿಢೀರ್ 250 ರೂ.ಗಳಿಗೂ ಅಧಿಕ ದರ ಏರಿಕೆಯಾಗಿರುವುದು ಆಕ್ರೋಶಕ್ಕೂ ಕಾರಣವಾಗಿದೆ. ಕೆಲವು ರಸಗೊಬ್ಬರದ ದರ 700 ರೂ.ಗಳವರೆಗೂ ಏರಿಕೆಯಾಗಿ ದಾಖಲೆ ನಿರ್ಮಿಸಿದಂತಾಗಿದೆ.

      ರಸಗೊಬ್ಬರ ಕಂಪನಿಗಳು ಏಪ್ರಿಲ್ 1 ರಿಂದಲೇ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿವೆ. ಈ ಆದೇಶ ಬೆಳಕಿಗೆ ಬಂಧಿರುವುದು ಕಳೆದ ಎರಡು ದಿನಗಳ ಹಿಂದೆ. ಈ ದರ ಕಂಡು ರೈತರು ಮಾತ್ರವಲ್ಲ, ವ್ಯಾಪಾರಸ್ಥರೂ ತಬ್ಬಿಬ್ಬಾಗಿದ್ದಾರೆ. ಈಗಷ್ಟೇ ಬೆಲೆ ಹೆಚ್ಚಳದ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ರೈತರು ಎದುರಿಸಬೇಕಿದೆ. ಈಗ ಬೇಸಿಗೆಯ ಕಾಲ ಕೆಲವು ಬೆಳೆಗೆ ಮಾತ್ರವೇ ರಸಗೊಬ್ಬರದ ಅಗತ್ಯವಿದೆ. ಹೀಗಾಗಿ ಎಲ್ಲ ರೈತರಿಗೂ ಈಗ ಬಿಸಿ ಮುಟ್ಟದು. ಆದರೆ ಮಳೆಗಾಲ ಪ್ರಾರಂಭವಾಗಿ ಮುಂಗಾರು ಬಿತ್ತನೆ ಕಾಲಕ್ಕೆ ರೈತರು ಕೈ ಹಿಸುಕಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ರಸಗೊಬ್ಬರದ ದರ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಏರಿಕೆಯಾಗಿರುವ ಉದಾಹರಣೆ ಇದುವರೆಗೂ ಕಂಡುಬಂದಿಲ್ಲ. ಈಗ ಶೇ.40 ರಷ್ಟು ಅಧಿಕ ಹೆಚ್ಚಳ ಮಾಡಿರುವುದು ಕೃಷಿ ಕ್ಷೇತ್ರದ ವಲಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾಗುವ ಸಮಯದಲ್ಲಿ ಬೆಲೆ ಏರಿಕೆಯಾಗುವ, ಕೊರತೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಬೇಸಿಗೆಯ ದಿನದಲ್ಲಿಯೇ ದಿಢೀರ್ ರಸಗೊಬ್ಬರದ ಬೆಲೆ ಏರಿಕೆಯಾಗಿರುವುದರಿಂದ ಅಷ್ಟು ಬಿಸಿ ತಾಕದೆ ಹೋದರೂ ಮುಂದಿನ ದಿನಗಳಲ್ಲಿ ಕೃಷಿಕರ ಮೇಲೆ ಸಾಕಷ್ಟು ಹೊಡೆತ ಬೀಳುವುದಂತೂ ಖಚಿತ.

      ರಸಗೊಬ್ಬರದ ಬೆಲೆ ಹೀಗೆ ವಿಪರೀತವಾಗಿ ಹೆಚ್ಚಳವಾಗಿರುವ ಬೆನ್ನಲ್ಲೇ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಕೆಲವೇ ಮಂದಿ ಬೆಲೆ ಹೆಚ್ಚಳವನ್ನು ಸಮರ್ಥಿಸಿಕೊಳ್ಳಲು ಹೋಗಿ ಆನಂತರ ಎದುರಾಗುವ ಪ್ರಶ್ನೆಗಳಿಗೆ ಸೈಲೆಂಟ್ ಆಗುತ್ತಿದ್ದಾರೆ. ಕೃಷಿಕರು ಹಾಗೂ ಇದಕ್ಕೆ ಪೂರಕವಾಗಿರುವ ವಾಟ್ಸ್‍ಪ್ ಗ್ರೂಪ್‍ಗಳಲ್ಲಿ ನಿನ್ನೆಯಿಂದ ತರಾವರಿ ಚರ್ಚೆಗಳು ಆರಂಭವಾಗಿವೆ.
ರಾಸಾಯನಿಕ ಗೊಬ್ಬರ ಹಾಕಿ ಭೂಮಿಯ ಫಲವತ್ತತೆ ಹಾಳಾಗಿ ಹೋಗಿತ್ತು. ಈಗ ಇಷ್ಟೊಂದು ದರ ಏರಿಕೆಯಾಗಿರುವುದರಿಂದ ರೈತರು ರಸಗೊಬ್ಬರದಿಂದ ಹೊರ ಬರಲು ಒಂದು ಒಳ್ಳೆಯ ಅವಕಾಶ ಎಂದು ಕೆಲವರು ಸಂದೇಶ ಕಳುಹಿಸಿದರೆ, ಇನ್ನು ಕೆಲವರು ಎಲ್ಲದಕ್ಕೂ ಸರ್ಕಾರವನ್ನೇ ದೂಷಿಸುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

      ಇಂತಹ ಕಾಮೆಂಟ್‍ಗಳಿಗೆ ಅದೇ ವೇಗದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮೂರು ಕೃಷಿ ಕಾಯಿದೆಗಳನ್ನು ಹೇಳದೆ ಕೇಳದೆ ಜಾರಿಗೆ ತರಲಾಯಿತು. ಅವುಗಳ ದುಷ್ಪರಿಣಾಮವನ್ನು ವಿವರಿಸಿದರೂ ಸರ್ಕಾರ ಕೇಳುವ ಸ್ಥಿತಿಯಲ್ಲಿಲ್ಲ. ರೈತರೊಂದಿಗೆ ಚರ್ಚೆಯನ್ನೂ ನಡೆಸುತ್ತಿಲ್ಲ. ಇದಾದ ನಂತರ ಎಲ್‍ಪಿಜಿ ಗ್ಯಾಸ್ ದರ ಹೆಚ್ಚಿಸಲಾಯಿತು. ಕಳೆದ ಮೂರ್ನಾಲ್ಕು ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದೆ. ಮುಂದೆ ಇನ್ನೇನು ಕಾದಿದೆಯೋ ಎಂಬ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.

ಅಂತರಾಷ್ಟ್ರೀಯ ಮಟ್ಟದ ಲಾಭಿ

      ಕಂಪನಿಗಳು ಬೆಲೆ ಏರಿಸಿದರೂ ಅದರ ನಿಯಂತ್ರಣ ಸರ್ಕಾರದ ಕೈಯಲ್ಲಿ ಇರಬೇಕು. ಆದರೆ ಸರ್ಕಾರಕ್ಕೆ ಆ ಶಕ್ತಿ ಇಲ್ಲ. ಇದೆಲ್ಲವೂ ಅಂತರಾಷ್ಟ್ರೀಯ ಮಟ್ಟದ ಲಾಭಿ. ದಲ್ಲಾಳಿಗಳ ಪರ ಸರ್ಕಾರಗಳು ಕೆಲಸ ಮಾಡುತ್ತಿವೆ. ಅದಾನಿ, ಅಂಬಾನಿಯಂತಹ ಶ್ರೀಮಂತರಿಗೆ ಸರ್ಕಾರ ತ್ಯಾಗ ಮಾಡುತ್ತಿದೆ. ಆದರೆ ಅವರ ಕೊಡುಗೆ ಏನು? ಇಂತಹ ಮಹನೀಯರು ಮನಸ್ಸು ಮಾಡಿ ದೇಸಿಯವಾಗಿಯೇ ರೈತರಿಗೆ ಅನುಕೂಲವಾಗುವಂತಹ ಉತ್ಪಾದನೆಗಳ ಕಡೆಗೆ ಗಮನ ಹರಿಸಬಹುದಲ್ಲವೆ..? ಎಲ್ಲದಕ್ಕೂ ವಿದೇಶಗಳತ್ತ ನೋಡಬೇಕೆ..? ಈಗಾಗಲೇ ರೈತರು ಉಪಯೋಗಿಸುವ ವಿವಿಧ ಉಪಕರಣಗಳ ಬೆಲೆ ಹೆಚ್ಚಳವಾಗಿದೆ. ರೈತರು ಬದುಕುವುದೇ ಕಷ್ಟವಾಗಿದೆ. ಅವರ ಬೆಳೆಗೆ ನ್ಯಾಯೋಚಿತ ಬೆಲೆ ಸಿಗುತ್ತಿಲ್ಲ. ಈ ಕಡೆಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ರಸಗೊಬ್ಬರಗಳ ಬೆಲೆ ಹೆಚ್ಚಳವಾಗಿದ್ದು, ಇದರಿಂದ ರೈತರಿಗೆ ಭಾರಿ ಪೆಟ್ಟು ಬೀಳಲಿದೆ. ರೈತರು ಕೃಷಿಯಿಂದ ವಿಮುಖರಾಗಲು ಏನೆಲ್ಲಾ ಬೇಕೋ ಅದೆಲ್ಲವೂ ನಡೆಯುತ್ತಿದೆ. ಇದು ಈ ದೇಶದ ದುರಂತ.

-ಆನಂದ ಪಟೇಲ್, ಜಿಲ್ಲಾಧ್ಯಕ್ಷರು, ರೈತಸಂಘ ಹಾಗೂ ಹಸಿರು ಸೇನೆ.

ರೈತರಿಗಷ್ಟೇ ಅಲ್ಲ, ವರ್ತಕರಿಗೂ ಸಂಕಷ್ಟ :

 

     ಈ ರೀತಿ ದರ ಹೆಚ್ಚಳವಾಗುವುದರಿಂದ ರೈತರು ಮಾತ್ರ ಸಂಕಷ್ಟಕ್ಕೆ ಸಿಲುಕುವುದಿಲ್ಲ, ವ್ಯಾಪಾರಸ್ಥರೂ ತೊಂದರೆಗೆ ಸಿಲುಕುತ್ತಾರೆ. ಹಿಂದೆಲ್ಲ ಫರ್ಟಿಲೈಸರ್ ಸ್ಟಾಕ್ ಇರುತ್ತಿತ್ತು. ಯಾವಾಗ ಬೇಕದರೂ ಕೆ.ಜಿ.ಗಟ್ಟಲೆ ತರಬಹುದಿತ್ತು. ಈಗ ಇಡೀ ಜಿಲ್ಲೆಯಲ್ಲಿ ಹುಡುಕಿದರೂ ಅರ್ಧ ಕೆ.ಜಿ. ಯೂರಿಯಾ ಸಿಗುವುದಿಲ್ಲ. ತುಮಕೂರು ಜಿಲ್ಲೆಯಲ್ಲಿ ಸುಮಾರು 600 ಗೊಬ್ಬರದ ಅಂಗಡಿಗಳಿವೆ. ಮುಂದೆ ಇವುಗಳಲ್ಲಿ ಬಹುಪಾಲು ಮುಚ್ಚಿ ಹೋಗಲಿವೆ. ಸರ್ಕಾರದ ನೀತಿ ನಿಯಮಗಳು, ಹೆಚ್ಚುತ್ತಿರುವ ದರ, ತೆರಿಗೆ, ನಿರ್ವಹಣೆ ವೆಚ್ಚ ಇವೆಲ್ಲವೂ ಬಾಧಿಸಲಿವೆ. ಈಗಾಗಲೇ ಕೃಷಿ ಕ್ಷೇತ್ರ ದಿಕ್ಕೆಟ್ಟು ಹೋಗಿದೆ. ಕೆಲವೇ ಮಂದಿ ಇದನ್ನು ನಂಬಿದ್ದಾರೆ. ಅನಿವಾರ್ಯವಾಗಿ ಕೃಷಿಯಲ್ಲಿ ತೊಡಗಿದ್ದಾರೆ. ಮುಂದೆ ಯಾರೂ ಈ ಕ್ಷೇತ್ರವನ್ನು ಇಷ್ಟ ಪಡುವುದಿಲ್ಲ. ಅದೇಕೋ ಗೊತ್ತಿಲ್ಲ, ಈ ಸಮಸ್ಯೆಗಳ ಬಗ್ಗೆ, ಪರಿಹಾರದ ಬಗ್ಗೆ ಕೇಳುವ ಜನರೇ ಇಲ್ಲವಾಗಿರುವುದು ಶೋಚನೀಯ ಸಂಗತಿ. 

-ಚಿಕ್ಕವೆಂಕಟಯ್ಯ, ಮಾಜಿ ಜಿ.ಪಂ.ಸದಸ್ಯರು ಹಾಗೂ ಪ್ರಗತಿಪರ ಕೃಷಿಕರು.

 

ಸಾ.ಚಿ.ರಾಜಕುಮಾರ

 

Recent Articles

spot_img

Related Stories

Share via
Copy link