ಬೆಂಗಳೂರು:
ಮಾಲಿವುಡ್‌ನಲ್ಲಿ ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಚಿತ್ರರಂಗ ಅಲ್ಲೋಲ ಕಲ್ಲೋಲ ಆಗಿದೆ. ಹೇಮಾ ಕಮಿಟಿಯಂತೆ ಮಹಿಳೆಯರ ಸುರಕ್ಷತೆಗಾಗಿ ಸ್ಯಾಂಡಲ್‌ವುಡ್‌ನಲ್ಲಿಯೂ ಸಮಿತಿ ರಚಿಸುವ ಪ್ರಸ್ತಾಪಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ವಿರೋಧ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗವನ್ನು ನಡುಗಿಸಿದೆ. ಮಾಲಿವುಡ್ನ ಕರಾಳ ಮುಖವನ್ನು ಈ ವರದಿ ಬಲಿಗೆಳೆದಿದ್ದು, ಆರೋಪ ಪ್ರತ್ಯಾರೋಪಗಳು ಮುಂದುವರಿದಿದೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲೂ ಸಮಿತಿ ರಚನೆ ಆಗಬೇಕೆಂಬ ಬೇಡಿಕೆಗಳು ಬಂದಿವೆ.
ಕಮಿಟಿ ರಚನೆಗೆ ಇತ್ತೀಚೆಗಷ್ಟೇ ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ’ (ಫೈರ್) ನಿಯೋಗ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಸೋಮವಾರ ಈ ಬಗ್ಗೆ ಫಿಲ್ಮ್ ಚೇಂಬರ್ನಲ್ಲಿ ಮಹತ್ವದ ಸಭೆ ನಡೆದಿದ್ದು, ಮಂಡಳಿಯ ಹಲವು ಸದಸ್ಯರು ಸಮಿತಿ ರಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.