ಬೆಳಗಾವಿ:
ಸಾಲ ಮರುಪಾವತಿಸಲು ವಿಳಂಬ ಮಾಡಿದ ಕಾರಣಕ್ಕೆ ಖಾಸಗಿ ಫೈನಾನ್ಸ್ ಸಿಬ್ಬಂದಿಗಳು ಒಂದು ತಿಂಗಳ ಬಾಣಂತಿ ಹಾಗೂ ಹಸುಗೂಸು ಸೇರಿ ಮನೆಯ ಎಲ್ಲರನ್ನೂ ಹೊರಗೆ ಹಾಕಿ, ಮನೆಯನ್ನು ಜಪ್ತಿ ಮಾಡಿರು ಘಟನೆ ಬೆಳಗಾವಿ ಸಮೀಪದ ತಾರಿಹಾಳದಲ್ಲಿ ಶುಕ್ರವಾರ ನಡೆದಿದೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ಗಣಪತಿ ರಾಮಚಂದ್ರ ಲೋಹಾರ್ ಅವರ ಮನೆ ಜಪ್ತಿ ಮಾಡಲಾಗಿದೆ. ಗಣಪತಿ ಅವರು 5 ವರ್ಷಗಳ ಹಿಂದೆ ಮನೆ ಕಟ್ಟಿಸಲು ಖಾಸಗಿ ಫೈನಾನ್ಸ್‌ನಿಂದ 5 ಲಕ್ಷ ಸಾಲ ಪಡೆದಿದ್ದರು. ನಿರಂತರ ಮೂರು ವರ್ಷ ಕಂತುಗಳನ್ನು ಸರಿಯಾಗಿಯೇ ಕಟ್ಟಿದ್ದಾರೆ. ವೃದ್ಧ ತಾಯಿಗೆ ಅನಾರೋಗ್ಯ. ಮಗಳ ಹೆರಿಗೆ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿಂದ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಉಳಿದ ಹಣವನ್ನು ಒಂದೇ ಬಾರಿಗ ಪಾವತಿಸವಂತೆ ಕಂಪನಿ ಗಣಪತಿಯವರಿಗೆ ಸೂಚಿಸಿದೆ.
ಕಟ್ಟದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ತಂದ ಫೈನಾನ್ಸ್ ಕಂಪನಿಯು, ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲೇ ಮನೆ ಖಾಲಿ ಮಾಡಿಸಿದ್ದಾರೆ, ಇದರಿಂದಾಗಿ ಬಾಣಂತಿ ಹಾಗೂ ಮಗು ಸಂಕಷ್ಟ ಎದುರಿಸುವಂತಾಗಿದೆ.
ಈ ನಡುವೆ ಮಾಹಿತಿ ತಿಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ಸಚಿವರ ಆಪ್ತ ಸಹಾಯಕರು ಮೈಕ್ರೋ ಫೈನಾನ್ಸ್ ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಿ ಕುಟುಂಬಕ್ಕೆ ಮನೆಯನ್ನು ಸಿಗುವಂತೆ ಮಾಡಿದ್ದಾರೆ. ಅಲ್ಲದೆ, ಕುಟುಂಬಕ್ಕೆ ಆರ್ಥಿಕ ಸಹಾಯದ ಭರವಸೆಯನ್ನೂ ನೀಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿಯವರು, ಸಾಲ ನೀಡಿ, ಜನರಿಗೆ ಕಿರುಕುಳ ನೀಡುವ ಮೈಕ್ರೋಫೈನಾನ್ಸ್ ಕಂಪನಿಗಳಿಗೆ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ.
ಸಂಕಷ್ಟದ ಸಮಯದ್ಲಿ ಜನರು ಸಾಲ ಪಡೆಯುತ್ತಾರೆ. ಮರುಪಾವತಿಗೆ ಸಮಯ ನೀಡಬೇಕು. ಕಂಪನಿಗಳ ವಿರುದ್ಧ ಗ್ರಾಹಕರು ದೂರು ನೀಡಿದ್ದೇ ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ನಡುವೆ ಮಧ್ಯವರ್ತಿಗಳ ಮೂಲಕ ಸಾಲ ಪಡೆದು ವಂಚಿಸುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಾಯಿತಾ ಸಂಘದ ಸದಸ್ಯರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಫೈನಾನ್ಸ್ ಕಂಪನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯರು ಬೆದರಿಕೆ ಹಾಕಿದ್ದಾರೆ.
ರಿಕವರಿ ಏಜೆಂಟ್‌ಗಳು ನಮ್ಮ ಮನೆಗಳಿಗೆ ಪ್ರತೀನಿತ್ಯ ಭೇಟಿ ನೀಡಿ, ಸಾಲ ಮರುಪಾವತಿಸುವಂತೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಸಂಬಂಧ ಸರ್ಕಾರ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.