ಚಂಡೀಗಢ:
ಹರಿಯಾಣ ಪೊಲೀಸ್ ಅಧಿಕಾರಿ ಸಂದೀಪ್ ಕುಮಾರ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಒಂದು ದೊರೆಕಿದೆ. ಎಫ್‌ಐಆರ್‌ನಲ್ಲಿ ಐಪಿಎಸ್ ಅಧಿಕಾರಿ ವೈ ಪುರಣ್ ಕುಮಾರ್ ಅವರ ಗನ್‌ಮ್ಯಾನ್ ಸುಶೀಲ್, ಕುಮಾರ್ ಅವರ ಪತ್ನಿ ಪಿ ಅವನೀತ್ ಕೌರ್, ಬಟಿಂಡಾ ಗ್ರಾಮಾಂತರ ಶಾಸಕ ಅಮಿತ್ ರತ್ನ ಮತ್ತು ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಸದ್ಯ ನಡೆಯುತ್ತಿರುವ ತನಿಖೆಗಳನ್ನು ಉಲ್ಲೇಖಿಸಿ ಅಧಿಕಾರಿಗಳು ಎಫ್‌ಐಆರ್ ಪ್ರತಿಯನ್ನು ನೀಡಲು ನಿರಾಕರಿಸಿದ್ದಾರೆ. ಹರಿಯಾಣದಲ್ಲಿ ಸಾರ್ವಜನಿಕ ಮತ್ತು ರಾಜಕೀಯವಾಗಿ ಗಮನ ಸೆಳೆದಿರುವ ಪ್ರಕರಣದಲ್ಲಿ ಎಫ್‌ಐಆರ್ ದಾಖಲು ಮಹತ್ವದ ಬೆಳವಣಿಗೆಯಾಗಿದೆ.
2001 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ 52 ವರ್ಷದ ವೈ ಪೂರಣ್ ಕುಮಾರ್, ರೋಹ್ಟಕ್‌ನ ಸುನಾರಿಯಾದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದಲ್ಲಿ ಇನ್ಸ್‌ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಕ್ಟೋಬರ್ 7 ರಂದು, ಚಂಡೀಗಢದ ಸೆಕ್ಟರ್ 11 ರಲ್ಲಿರುವ ಅವರ ನಿವಾಸದಲ್ಲಿ ಅವರು ಮೃತಪಟ್ಟಿರುವುದು ಪತ್ತೆಯಾಗಿದ್ದು, ಅವರು ಸ್ವತಃ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಿಯಾಣ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶತ್ರುಜೀತ್ ಕಪೂರ್ ಸೇರಿದಂತೆ ಎಂಟು ಹಿರಿಯ ಅಧಿಕಾರಿಗಳ ವಿರುದ್ಧ ಸ್ಪಷ್ಟ ಜಾತಿ ಆಧಾರಿತ ತಾರತಮ್ಯ, ಮಾನಸಿಕ ಕಿರುಕುಳ, ಸಾರ್ವಜನಿಕ ಅವಮಾನ ಮತ್ತು ದೌರ್ಜನ್ಯಗಳ ಕುರಿತು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಪೂರಣ್ ಕುಮಾರ್ ಸಾವನ್ನಪ್ಪಿದ ಕೇವಲ ಒಂದು ವಾರದ ನಂತರ, ಅಕ್ಟೋಬರ್ 14 ರಂದು ರೋಹ್ಟಕ್‌ನ ಲಾಧೋಟ್ ಗ್ರಾಮದಲ್ಲಿ 41 ವರ್ಷದ ಎಎಸ್‌ಐ ಸಂದೀಪ್ ಲಾಥರ್ ಸಾವನ್ನಪ್ಪಿದ್ದರು. ಐಪಿಎಸ್ ಅಧಿಕಾರಿ ವೈ ಪುರಣ್ ಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಆತ್ಮಹತ್ಯೆ ಪತ್ರ ಮತ್ತು ಆರು ನಿಮಿಷಗಳ ವೀಡಿಯೊವನ್ನು ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಐಪಿಎಸ್ ಅಧಿಕಾರಿಯ ವಿರುದ್ಧ ತನ್ನ ಬಳಿ “ಸಾಕಷ್ಟು ಪುರಾವೆಗಳಿವೆ” ಎಂದು ಅವರು ಹೇಳಿಕೊಂಡರು, ಕುಮಾರ್ “ಕುಟುಂಬದ ಅವಮಾನವನ್ನು ತಪ್ಪಿಸಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಹೇಳಿದ್ದರು.
ಆರೋಪಿಗಳ ವಿರುದ್ಧದ ನಿರ್ದಿಷ್ಟ ಆರೋಪಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಈ ಮಧ್ಯೆ ಎಎಸ್‌ಐ ಸಂದೀಪ್ ಕುಮಾರ್ ಅವರ ಮರಣೋತ್ತರ ಪರೀಕ್ಷೆಯನ್ನು ನಾಳೆ ಬೆಳಿಗ್ಗೆ 8 ಗಂಟೆಗೆ ನಿಗದಿಪಡಿಸಲಾಗಿದೆ. ತದನಂತರ ರೋಹ್ಟಕ್‌ನಲ್ಲಿರುವ ಸ್ಥಳೀಯ ಸ್ಮಶಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.








