ತೂತುಕುಡಿ:
ಬಿಜೆಪಿ ದಕ್ಷಿಣ ಜಿಲ್ಲಾಧ್ಯಕ್ಷ ಚಿತ್ರಾಂಗತನ್ ನೀಡಿದ ದೂರಿನ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ತಮಿಳುನಾಡು ಮೀನುಗಾರಿಕೆ, ಮೀನುಗಾರರ ಕಲ್ಯಾಣ ಮತ್ತು ಪಶುಸಂಗೋಪನೆ ಸಚಿವ ಅನಿತಾ ಆರ್ ರಾಧಾಕೃಷ್ಣನ್ ವಿರುದ್ಧ ತೂತುಕುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಪತಿ ಅವರಿಗೆ ಸಲ್ಲಿಸಿರುವ ದೂರಿನ ಪ್ರಕಾರ, ಮಾರ್ಚ್ 22ರಂದು ತಾಂಡಪಥುವಿನಲ್ಲಿ ನಡೆದ ಡಿಎಂಕೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮೀನುಗಾರಿಕಾ ಸಚಿವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಧಾಕೃಷ್ಣನ್ ಅವರ ಹೇಳಿಕೆ ಅಸಹ್ಯಕರ, ಹೇಯ ಮತ್ತು ಅಸಂಸದೀಯವಾಗಿದೆ. ತಮ್ಮ ಸೇಲಂ ರೋಡ್‌ಶೋನಲ್ಲಿ ದಿವಂಗತ ಮುಖ್ಯಮಂತ್ರಿ ಕಾಮರಾಜರನ್ನು ಹೊಗಳಿದ್ದಕ್ಕಾಗಿ ಅವರು ಮೋದಿಯನ್ನು ಕೆಟ್ಟದಾಗಿ ಟೀಕಿಸಿದ್ದಾರೆ ಎಂದು ಚಿತ್ರಾಂಗತನ್ ತಿಳಿಸಿದ್ದಾರೆ.
ಇದು ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯಾಗಿದ್ದು, ಸಚಿವರು ಮತ್ತು ಸಭೆಯ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.