ಇಂಫಾಲ್:
ಬುಡಕಟ್ಟು ನಾಯಕರ ವೇದಿಕೆ(ಐಟಿಎಲ್‌ಎಫ್) ವಕ್ತಾರ ಗಿಂಜಾ ವುಲ್‌ಜಾಂಗ್ ವಿರುದ್ಧ ಮಣಿಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಐಟಿಎಲ್‌ಎಫ್ ಈ ಆರೋಪವನ್ನು ತಳ್ಳಿಹಾಕಿದೆ.
ವ್ಯಾಪಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ‘ಶೂನ್ಯ ಎಫ್‌ಐಆರ್’ ದಾಖಲಿಸಿದ ಮಣಿಪುರ ಪೊಲೀಸರು, ಇಂಫಾಲ್ ಉಪವಿಭಾಗದಲ್ಲಿ ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ದ್ವೇಷ ಉತ್ತೇಜಿಸುವುದು, ಮಾನನಷ್ಟ, ವದಂತಿಗಳನ್ನು ಹರಡುವುದು ಸೇರಿದಂತೆ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಎಫ್‌ಐಆರ್ ಅನ್ನು ತನಿಖೆಗಾಗಿ ನಂತರ ತಮೆಂಗ್ಲಾಂಗ್ ಜಿಲ್ಲೆಯ ಖಂಗ್ಶಾಂಗ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತಿದೆ.ಬಹುಸಂಖ್ಯಾತ ಸಮುದಾಯವು ರೈಲುಗಳ ಮೂಲಕ ಕಣಿವೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿದೆ ಎಂದು ವಲ್ಜಾಂಗ್ ಹೇಳಿಕೆ ನೀಡಿದ ನಂತರ ಖಾಂಗ್ಶಾಂಗ್ ರೈಲ್ವೆ ನಿಲ್ದಾಣದಲ್ಲಿ ತಮ್ಮ ಸರಕುಗಳನ್ನು ಲೂಟಿ ಮಾಡಬಹುದು ಎಂದು ಹೆದರಿದ ವ್ಯಾಪಾರಿಗಳು ದೂರು ದಾಖಲಿಸಿದ್ದಾರೆ.








