ಬೆಂಗಳೂರು:
ಐಪಿಎಸ್ ಅಧಿಕಾರಿಗೆ ಬೆದರಿಕೆ ಮತ್ತು ಸುಳ್ಳು ಆರೋಪ ಮಾಡಿದ ಆರೋಪದ ಮೇರೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ಆಪ್ತ ಸುರೇಶ್ ಬಾಬು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಡಿಜಿಪಿ ಚಂದ್ರಶೇಖರ್ ಅವರು ನೀಡಿದ ದೂರಿನ ಮೇರೆಗೆ ಎಚ್.ಡಿ. ಕುಮಾರಸ್ವಾಮಿ ಸೇರಿ ಮೂವರ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಿಎನ್ಎಸ್ ಸೆಕ್ಷನ್ 224ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಚ್ಡಿ ಕುಮಾರಸ್ವಾಮಿ ಅವರನ್ನು ಎ1 ಎಂದು ಉಲ್ಲೇಖಿಸಲಾಗಿದೆ. ಹಾಗೆಯೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎ 2 ಹಾಗೂ ಜೆಡಿಎಸ್ ಮುಖಂಡ ಸುರೇಶ್ ಬಾಬು ಅವರನ್ನು ಎ3 ಎಂದು ನಮೂದಿಸಲಾಗಿದೆ.
ದಿನಾಂಕ 29-09-2024ರಂದು ಎಚ್.ಡಿ. ಕುಮಾರಸ್ವಾಮಿ ಅವರ ಮಗನಾದ ನಿಖಿಲ್ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪ ಮಾಡಿರುತ್ತಾರೆ. ನಂತರ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತರಾದ ಸುರೇಶ್ ಬಾಬು ಅವರು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ, ಮುಖ್ಯ ಕಾರ್ಯದರ್ಶಿಯವರಿಗೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು, ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಆರೋಪಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರು ಆಧರಿಸಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಹೆಚ್ ಡಿಕೆ ಆಪ್ತ ಸುರೇಶ್ ಬಾಬು ವಿರುದ್ಧ ಎಫ್‌ಐಆರ್ ದಾಖಲಾಗಿದೆ.