ನವದೆಹಲಿ:
ವಿಮಾನವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನವದೆಹಲಿಯಲ್ಲಿ ನಡೆದಿದೆ. ದೆಹಲಿ ವಿಮಾನ ನಿಲ್ದಾಣದಿಂದ ದಿಮಾಪುರಕ್ಕೆ ಭಾನುವಾರ ಹೊರಡಲು ಸಿದ್ಧತೆ ನಡೆಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ, ಯಾವುದೇ ಹಾನಿ ಸಂಭವಿಸಿಲ್ಲ. ಪವರ್ ಬ್ಯಾಂಕ್ ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಕ್ಯಾಬಿನ್ ಸಿಬ್ಬಂದಿ ನಂದಿಸಿದ್ದಾರೆ ಎಂದು ಇಂಡಿಗೋ ತಿಳಿಸಿದೆ.
ದೆಹಲಿಯಿಂದ ನಾಗಾಲ್ಯಾಂಡ್‌ನ ದಿಮಾಪುರಕ್ಕೆ ಅಕ್ಟೋಬರ್ 19 ರಂದು ಹೊರಡಲು ಸಿದ್ಧವಾಗುತ್ತಿದ್ದ 6ಇ 2107 ವಿಮಾನದ ಸೀಟ್-ಬ್ಯಾಕ್ ಪಾಕೆಟ್‌ನಲ್ಲಿ ಇಟ್ಟಿದ್ದ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ವಿಮಾನವು ನಿಲ್ದಾಣದಲ್ಲಿ ಟ್ಯಾಕ್ಸಿ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಬಳಿಕ ಕ್ಯಾಬಿನ್ ಸಿಬ್ಬಂದಿ ಸುರಕ್ಷಿತ ಕಾರ್ಯಾಚರಣೆಯನ್ನು ನಡೆಸಿ ಅದನ್ನು ತ್ವರಿತವಾಗಿ ನಂದಿಸಿದರು. ಕೆಲವೇ ಸೆಕೆಂಡುಗಳಲ್ಲಿ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್, ಏರ್‌ಬಸ್ ಎ320 ನಿಯೋ ವಿಮಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಎI2107 ವಿಮಾನವು ದೆಹಲಿ ವಿಮಾನ ನಿಲ್ದಾಣದಿಂದ ಕೊಂಚ ವಿಳಂಬವಾಗಿ ಮಧ್ಯಾಹ್ನ 2.33 ಕ್ಕೆ ಹೊರಟು 4.45 ಕ್ಕೆ ದಿಮಾಪುರ್ ನಲ್ಲಿ ಇಳಿಯಿತು. ವಿಮಾನವು ದೆಹಲಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.25ಕ್ಕೆ ಹಾರಬೇಕಾಗಿತ್ತು. ಆದರೆ ತುರ್ತು ಕಾರಣದಿಂದ ಅದರ ಹಾರಾಟದಲ್ಲಿ ಕೊಂಚ ವಿಳಂಬವಾಗಿತ್ತು ಎಂದು ತಿಳಿಸಿದೆ.
ಶಿಷ್ಟಾಚಾರಕ್ಕೆ ಅನುಗುಣವಾಗಿ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ಈ ಕುರಿತು ಮಾಹಿತಿ ನೀಡಿದ್ದು, ಅಗತ್ಯವಿರುವ ಎಲ್ಲಾ ಪರಿಶೀಲನೆಗಳ ಅನಂತರ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಯಿತು ಎಂದು ಇಂಡಿಗೋ ಹೇಳಿದೆ.
ಘಟನೆಯ ಸಮಯದಲ್ಲಿ ಶಾಂತವಾಗಿ ಮತ್ತು ಸಹಕಾರದಿಂದ ಇದ್ದುದ್ದಕ್ಕಾಗಿ ಗ್ರಾಹಕರಿಗೆ ಧನ್ಯವಾದಗಳನ್ನು ಅರ್ಪಿಸಿರುವ ಇಂಡಿಗೋ ಪ್ರಯಾಣಿಕರ ಅನುಕೂಲತೆಗೆ ಅವರಿಗೆ ಉಪಹಾರ ವಿತರಣೆ ಮಾಡಿತ್ತು. ಅಗತ್ಯ ಸೌಲಭ್ಯವನ್ನು ಕಲ್ಪಿಸಿರುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಕಳೆದ ವಾರದ ಆರಂಭದಲ್ಲಿ ಚೀನಾದ ವಿಮಾನವೊಂದರಲ್ಲಿ ಹೀಗೆಯೇ ಬೆಂಕಿ ಕಾಣಿಸಿಕೊಂಡಿತ್ತು. ಹ್ಯಾಂಗ್‌ಝೌನಿಂದ ಸಿಯೋಲ್‌ಗೆ ತೆರಳುತ್ತಿದ್ದ ಏರ್ ಚೀನಾ ವಿಮಾನದ ಓವರ್‌ಹೆಡ್ ಕಂಪಾರ್ಟ್‌ಮೆಂಟ್‌ನಲ್ಲಿ ಇರಿಸಲಾಗಿದ್ದ ಲಿಥಿಯಂ ಬ್ಯಾಟರಿ ಬೆಂಕಿಗೆ ಆಹುತಿಯಾಯಿತು.








